ಮೋದಿ ಧರ್ಮ ಪಕ್ಷಪಾತಿ ಪ್ರಧಾನಿ: ವೇಣುಗೋಪಾಲ್ ಟೀಕೆ

Update: 2017-07-08 14:26 GMT

ಉಡುಪಿ, ಜು.8: ಜಾತ್ಯತೀತ ದೇಶವಾಗಿರುವ ಭಾರತದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಕೂಡ ಇಫ್ತಾರ್ ಕೂಟವನ್ನು ಆಯೋಜಿಸಿದ್ದರು. ಆದರೆ ಧರ್ಮ ಪಕ್ಷಪಾತಿ ಪ್ರಧಾನಿ ನರೇಂದ್ರ ಮೋದಿ ಕಳೆದ ಮೂರು ವರ್ಷಗಳಿಂದ ಇಫ್ತಾರ್ ಕೂಟವನ್ನು ಮಾಡದೆ ರಾಜತಂತ್ರದ ಬದಲು ಬೂಟಾಟಿಕೆಯಲ್ಲಿ ತೊಡಗಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಆರೋಪಿಸಿದ್ದಾರೆ.

ಶನಿವಾರ ಬೆಳಗ್ಗೆ ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನ, ನಂತರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ, ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿಯವರಿಂದ ಅನುಗ್ರಹ ಮಂತ್ರಾಕ್ಷತೆ ಪಡೆದ ಅವರು ಬಳಿಕ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತಿದ್ದರು.

ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯ ಸರಕಾರ ಮಾಡಿರುವ ಅಭಿವೃದ್ಧಿ ಹಾಗೂ ಸಾಧನೆಯೇ ಮುಂದಿನ ಚುನಾವಣೆ ವಿಷಯವಾಗಿದೆ. ಸಮಾಜಮುಖಿ ಬದಲಾವಣೆ ಹಾಗೂ ಬಡವರ ಪರ ಯೋಜನೆ ಜಾರಿಯಲ್ಲಿ ರಾಜ್ಯ ಸರಕಾರ ಉತ್ತಮ ಸಾಧನೆ ಮಾಡಿದೆ ಎಂದು ಅವರು ಹೇಳಿದರು.

ಮುಂದಿನ ಚುನಾವಣೆಯಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೊಸ ಮುಖಗಳಿಗೂ ಅವಕಾಶ ನೀಡಲಾಗುವುದು. ನಿನ್ನೆ ಮಂಗಳೂರಿನಲ್ಲಿ ನಡೆದ ಉಡುಪಿ, ದ.ಕ. ಹಾಗೂ ಕೊಡಗು ಜಿಲ್ಲೆಗಳ ಪದಾಧಿಕಾರಿಗಳ ಸಭೆಯಲ್ಲಿ ಪಕ್ಷ ಸಂಘಟನೆ, ಬಲವರ್ಧನೆ ಹಾಗೂ ಬದಲಾವಣೆಗೆ ಕ್ರಮ ತೆಗೆದುಕೊಳ್ಳ ಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಆದರೆ ಕೋಮುವಾದಿಗಳು ಜಾತಿ ಧರ್ಮ ಮತಗಳ ಧ್ರುವೀಕರಣ ರಾಜಕೀಯ ಮಾಡುತ್ತಿದ್ದಾರೆ. ಬಿಜೆಪಿ ಕೇವಲ ಮತ ರಾಜಕೀಯದಲ್ಲಿ ನಿರತವಾಗಿದೆ. ಸಚಿವ ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಜವಾಬ್ದಾರಿಯಾಗಿದೆ ಎಂದ ಅವರು, ಪೇಜಾವರ ಸ್ವಾಮೀಜಿ ಇಫ್ತಾರ್ ಕೂಟ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಕಾಪು ಶಾಸಕ ವಿನಯ ಕುಮಾರ್ ಸೊರಕೆ, ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News