×
Ad

​ಗುಂಡಿಬೈಲು ಶಾಲೆಯ ನೂತನ ಕಟ್ಟಡಕ್ಕೆ ಜು.12ರಂದು ಶಿಲಾನ್ಯಾಸ

Update: 2017-07-08 20:35 IST

ಉಡುಪಿ, ಜು.8: 80 ವರ್ಷಗಳ ಹಿಂದೆ ವಕ್ವಾಡಿ ನಾರ್ಣಪ್ಪಯ್ಯ ಎಂಬವರು ಗುಂಡಿಬೈಲುನಲ್ಲಿ ಪ್ರಾರಂಭಿಸಿದ ಗುಂಡಿಬೈಲು ಶಾಲೆ ಈಗ ಪೇಜಾವರ ಮಠದ ಶ್ರೀವಿಜಯಧ್ವಜ ಜ್ಞಾನಪೀಠದ ಸುಪರ್ದಿಗೆ ಬಂದಿದ್ದು, ಇಲ್ಲೀಗ ಕನ್ನಡ ಮಾಧ್ಯಮದೊಂದಿಗೆ ಆಂಗ್ಲ ಮಾಧ್ಯಮದ ಶಾಲೆಯನ್ನೂ ಪ್ರಾರಂಭಿಸಲಾಗಿದೆ ಎಂದು ಪೇಜಾವರ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ಶ್ರೀಕೃಷ್ಣ ಮಠದಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಶ್ರೀಪಾದರು, ನಾರ್ಣಪ್ಪಯ್ಯ ಕುಟುಂಬಸ್ಥರು ಈ ಶಾಲೆ ನಡೆಸಲು ಸಾದ್ಯವಾಗದೇ, ಶಾಲಾ ಆಡಳಿತ ಮಂಡಳಿಯ ಒಪ್ಪಿಗೆ ಮೇರೆಗೆ ಪೇಜಾವರ ಮಠಕ್ಕೆ ಸಂಪೂರ್ಣ ಆಡಳಿತವನ್ನು ಹಸ್ತಾಂತರಿಸಿದ್ದಾರೆ ಎಂದರು.
ನಾವೀಗ ಇಲ್ಲಿ ಕನ್ನಡ ಮಾಧ್ಯಮದೊಂದಿಗೆ, ಆಂಗ್ಲ ಮಾಧ್ಯಮದ ಶಾಲೆಯನ್ನೂ ತೆರೆಯಲು ಇಲಾಖೆಯಿಂದ ಅನುಮತಿ ಪಡೆದಿದ್ದು, ಶಾಲೆಯ ಹಳೆಯ ಕಟ್ಟಡ ಶಿಥಿಲವಾಗಿರುವುದರಿಂದ ಇಲಾಖೆಯ ಸೂಚನೆಯಂತೆ ಅದನ್ನು ಕೆಡವಿ ನೂತನ ಕಟ್ಟಡ ನಿರ್ಮಿಸಲು ಜು.12ರಂದು ನೂತನ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಲಿದೆ ಎಂದು ತಿಳಿಸಿದರು.

ಈ ಶಾಲೆ ಪೇಜಾವರ ಮಠದ ಸುಪರ್ದಿಗೆ ಬಂದ ನಂತರ ಈ ವರ್ಷ ಕನ್ನಡ ಶಾಲೆಯಲ್ಲೂ ಮಕ್ಕಳ ಸಂಖ್ಯೆ ಹೆಚ್ಚಿದೆ. ಅಲ್ಲದೇ ಆಂಗ್ಲ ಮಾಧ್ಯಮದ ಪ್ಲೇ ಸ್ಕೂಲ್, ಎಲ್‌ಕೆಜಿ ಹಾಗೂ ಒಂದನೇ ತರಗತಿಗೆ 35 ಮಕ್ಕಳು ಸೇರ್ಪಡೆಗೊಂಡಿದ್ದಾರೆ ಎಂದರು. ಶ್ರೀಮಠದ ವತಿಯಿಂದ ನಡೆಯುವ ವಿದ್ಯೋದಯ ಶಾಲೆಯಂತೆ ಇಲ್ಲೂ ಗುಣಮಟ್ಟದ ಶಿಕ್ಷಣ ನೀಡುವುದು ನಮ್ಮ ಗುರಿಯಾಗಿದೆ. ಇದಕ್ಕಾಗಿ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಗಣ್ಯರನ್ನು ಒಳಗೊಂಡ ಆಡಳಿತ ಮಂಡಳಿಯನ್ನು ರಚಿಸಲಾಗಿದೆ ಎಂದು ಸ್ವಾಮೀಜಿ ನುಡಿದರು.

ಮೊದಲ ಹಂತದಲ್ಲಿ ಸುಮಾರು 1.50 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುವ ಕಟ್ಟಡದ ನಿರ್ಮಾಣಕ್ಕೆ ಜು.12ರ ಬುಧವಾರ ಬೆಳಗ್ಗೆ 11:15ಕ್ಕೆ ಶಾಲೆಯ ಹಳೆ ವಿದ್ಯಾರ್ಥಿಯಾಗಿರುವ ಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಶಿಲಾನ್ಯಾಸ ನೆರವೇರಿಸುವರು. ಸಚಿವ ಪ್ರಮೋದ್ ಮದ್ವರಾಜ್, ಮಾಜಿ ಶಾಸಕ ಕೆ.ರಘುಪತಿ ಭಟ್, ಉದ್ಯಮಿ ಜಿ.ಶಂಕರ್, ಡಿಡಿಪಿಐ ದಿವಾಕರ ಶೆಟ್ಟಿ, ನಗರಸಭಾ ಸದಸ್ಯೆ ಗೀತಾ ಶೇಟ್ ಉಪಸ್ಥಿತರಿರುವರು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಹಳೆವಿದ್ಯಾರ್ಥಿಗಳಾದ ಆಡಳಿತ ಮಂಡಳಿಯ ಪ್ರೊ.ದಯಾನಂದ ಶೆಟ್ಟಿ, ಶ್ರೀನಿವಾಸ ಬಲ್ಲಾಳ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News