ನರ್ಮ್ ಬಸ್ ಸೇವೆ ನಿಲುಗಡೆ ವಿರುದ್ಧ ಮನವಿ
ಉಡುಪಿ, ಜು.8: ಜಿಲ್ಲೆಯಲ್ಲಿ ನರ್ಮ್ ಬಸ್ ಸಂಚಾರ ನಿಲುಗಡೆಗೊಳಿಸಿದಲ್ಲಿ ತೀವ್ರವಾದ ಪ್ರತಿಭಟನೆ ನಡೆಸಲಾಗುವುದು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಎಚ್ಚರಿಸಿದೆ. ಈ ಕುರಿತು ಮನವಿ ಪತ್ರವನ್ನು ಅದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಹಾಗೂ ಉಡುಪಿ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಿದೆ.
ನರ್ಮ್ ಬಸ್ ಆರಂಭಗೊಂಡು ತಿಂಗಳು ಕಳೆಯುವುದರೊಳಗೆ ನಿಲುಗಡೆಯ ಪುಕಾರು ಹಬ್ಬಲಾರಂಭಿಸಿತ್ತು. ಆಗ ಜಿಲ್ಲಾ ಕೃಷಿಕ ಸಂಘ, ಬಸ್ಸುಗಳನ್ನು ಖಾಸಗಿ ಬಸ್ಸುಗಳ ಸಂಚಾರವಿರದ ಗ್ರಾಮಾಂತರ ಪ್ರದೇಶಗಳಿಗೆ ವಿಸ್ತರಿಸಿದರೆ ಕೃಷಿಕರು, ಜನಸಾಮಾನ್ಯರು ಹಾಗು ವಿದ್ಯಾರ್ಥಿಗಳಿಗೆ ಅನುಕೂಲವಾಗುವುದು ಎಂದು ಸಚಿವ ಪ್ರಮೋದ್ ಮಧ್ವರಾಜ್‌ರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತ್ತು.
ಜಿಲ್ಲಾ ಕೃಷಿಕ ಸಂಘದ ಮನವಿಗೆ ಸ್ಪಂದಿಸಿದ ಸಚಿವರು ಹಾಗೂ ಜಿಲ್ಲಾಡಳಿತ ನರ್ಮ್ ಬಸ್‌ಗಳನ್ನು ಜಿಲ್ಲೆಯ ಹಲವು ಗ್ರಾಮಾಂತರ ಪ್ರದೇಶಗಳಿಗೆ ಓಡಿಸಲು ಕ್ರಮಕೈಗೊಂಡಿತ್ತು. ಇದೀಗ ಖಾಸಗಿ ಬಸ್ ಮಾಲಕರು ಕೋರ್ಟ್ ನಿಂದ ತಡೆಯಾಜ್ಞೆ ತಂದ ಕಾರಣ ಜಿಲ್ಲೆಯಲ್ಲಿ ನರ್ಮ್ ಬಸ್ಸುಗಳ ಓಡಾಟ ನಿಲುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ ಎಂದು ಸಂಘ ಮನವಿಯಲ್ಲಿ ತಿಳಿಸಿದೆ.
ಜಿಲ್ಲೆಯ ಖಾಸಗಿ ಬಸ್‌ಗಳೇ ನೀತಿ-ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ಅವುಗಳ ನಡುವೆಯೇ ಇರುವ ಪೈಪೋಟಿಯಿಂದ ಬಸ್ ಪ್ರಯಾಣಿಕರಿಗೆ ಸಂಕಷ್ಟಗಳು ತಪ್ಪಿದ್ದಲ್ಲ. ಈ ಬಸ್ಸುಗಳಲ್ಲಿ ಹಿರಿಯ ನಾಗರೀಕರು, ಮಹಿಳೆಯರು- ಮಕ್ಕಳಿಗೆ ಮರ್ಯಾದೆ ನೀಡುವ ಸೌಜನ್ಯ ಇರುವ ಬಸ್ ಸಿಬಂದಿಗಳು ಬಹಳ ಕಡಿಮೆ. ಇವರುಗಳ ಮರ್ಜಿಗೆ ತಕ್ಕಂತೆ ಬಸ್ಸುಗಳ ಸಂಚಾರವೇ ಹೊರತು, ಪ್ರಯಾಣಿಕರ ಹಿತಾಸಕ್ತಿ, ಸುರಕ್ಷೆಗೆ ಗಮನ ಕಡಿಮೆ.
ಆದ್ದರಿಂದ ಯಾವುದೇ ಕಾರಣಕ್ಕೂ ಜಿಲ್ಲೆಯಲ್ಲಿ ನರ್ಮ್ ಬಸ್ಸುಗಳ ನಿಲುಗಡೆಯಾಗಬಾರದು. ಮತ್ತು ಈಗ ಆರಂಭಗೊಂಡಿರುವ ಮಾರ್ಗಗಳಲ್ಲಿ ಬಸ್ಸುಗಳ ಸಂಖ್ಯೆಯನ್ನು ಹೆಚ್ಚಿಸಬೇಕೆಂದು ಸಂಘವು ಮನವಿಯಲ್ಲಿ ಒತ್ತಾಯಿಸಿದೆ. ಮನವಿ ಸಲ್ಲಿಸಿದ ನಿಯೋಗದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು, ದಿನೇಶ್ ಶೆಟ್ಟಿ ಹೆರ್ಗ, ಸುಧರ್ಮಕುಂದರ್, ನಾರಾಯಣ ಪಿತ್ರೋಡಿ, ರವೀಂದ್ರ ಗುಜ್ಜರಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.