×
Ad

ಶರತ್ ಮಡಿವಾಳ ಅಂತ್ಯಸಂಸ್ಕಾರ

Update: 2017-07-08 20:54 IST

ಬಂಟ್ವಾಳ, ಜು. 8: ದುಷ್ಕರ್ಮಿಗಳಿಂದ ಮಾರಣಾಂತಿಕವಾಗಿ ಹಲ್ಲೆಗೆ ಒಳಗಾಗಿ ಶುಕ್ರವಾರ ರಾತ್ರಿ ಮೃತಪಟ್ಟ ಆರೆಸ್ಸೆಸ್ ಕಾರ್ಯಕರ್ತ, ಉದಯ ಲಾಂಡ್ರಿ ಮಾಲಕನ ಪುತ್ರ ಶರತ್ ಮಡಿವಾಳರ ಮೃತದೇಹದ ಅಂತ್ಯಸಂಸ್ಕಾರ ಅವರ ಸ್ವಗ್ರಾಮ ಸಜೀಪ ಮುನ್ನೂರಿನಲ್ಲಿ ಶನಿವಾರ ನಡೆಯಿತು.

ಮಂಗಳೂರಿನ ಆಸ್ಪತ್ರೆಯಲ್ಲಿದ್ದ ಮೃತದೇಹವನ್ನು ಬೆಳಗ್ಗೆ 10 ಗಂಟೆಗೆ ನಂತೂರು, ಪಡೀಲ್, ಬಿ.ಸಿ.ರೋಡ್ ಮಾರ್ಗವಾಗಿ ಸಜಿಪ ಮುನ್ನೂರಿನ ಮಡಿವಾಳ ಪಡ್ಪುವಿನಲ್ಲಿ ಅವರ ಮನೆಯ ಪಕ್ಕದಲ್ಲಿ ಮಧ್ಯಾಹ್ನ 3:30ರ ಸುಮಾರಿಗೆ ತಂದೆ ತನಿಯಪ್ಪ ಮಡಿವಾಳ ಚಿತೆಗೆ ಬೆಂಕಿ ಕೊಡುವ ಮೂಲಕ ಅಂತ್ಯಸಂಸ್ಕಾರ ನಡೆಸಲಾಯಿತು. ಇದಕ್ಕೂ ಮೊದಲು ಕಂದೂರಿನಲ್ಲಿ ಮೈದಾನವೊಂದರಲ್ಲಿ ಸಾರ್ವಜನಿಕ ಅಂತ್ಯದರ್ಶನಕ್ಕೆ ಇಡಲಾಯಿತು. ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಹಿಂದುಗಡೆ ನೂರಾರು ಬೈಕ್ ಹಾಗೂ ಕಾರುಗಳು ಇದ್ದು ಬಿಜೆಪಿ, ಸಂಘಪರಿವಾರದ ನಾಯಕರು, ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಮೃತದೇಹ ಸಾಗಿಸುತ್ತಿದ್ದ ಮಾರ್ಗದ ಪೇಟೆ, ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮೆರವಣಿಗೆಯಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ನಿಯೋಜಿಸಲಾಗಿತ್ತು. ಆಸ್ಪತ್ರೆಯಿಂದ ಮೃತದೇಹ ಹೊರಟ ವೇಳೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ, ಮಾರಿಪಳ್ಳ, ತುಂಬೆ, ಕೈಕಂಬ, ಬಿ.ಸಿ.ರೋಡ್, ಮೆಲ್ಕಾರ್‌ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿದ್ದರು.

ಕಲ್ಲು ತೂರಾಟದಿಂದ ಬಿ.ಸಿ.ರೋಡ್ ಉದ್ವಿಗ್ನ:

ಕೈಕಂಬದಲ್ಲಿ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರೂ ಮಾಲಕರು, ಕೆಲಸದವರು ಕೈಕಂಬ ವಿವಿಧೆಡೆ ಜಮಾಯಿಸಿ ಮೆರವಣಿಗೆಯನ್ನು ವೀಕ್ಷಿಸುತ್ತಿದ್ದರು. ಮೆರವಣಿಗೆಯ ವಿಡಿಯೊ ಮಾಡಿದ ಕಾರಣಕ್ಕೆ ಮೆರವಣಿಗೆಯಲ್ಲಿದ್ದರು ಆಕ್ಷೇಪ ವ್ಯಕ್ತಪಡಿಸಿದ್ದು ಈ ವೇಳೆ ಪರಸ್ಪರ ಕಲ್ಲು ತೂರಾಟ ನಡೆದಿದೆ. ಪರಿಣಾಮ ಕೈಕಂಬದಲ್ಲಿ ಉದ್ವಿಗ್ನದ ವಾತಾವರಣ ಸೃಷ್ಟಿಯಾಯಿತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಲಾಠಿ ಪ್ರಹಾರ ನಡೆಸಿ ಜನರನ್ನು ಚದುರಿಸಿದ್ದಾರೆ. ಈ ಸಂದರ್ಭದಲ್ಲಿ ಕೆಲವರಿಗೆ ಗಾಯವಾಗಿದ್ದು ವಿವಿಧ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳದಲ್ಲಿದ್ದ ಹಲವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಿ.ಸಿ.ರೋಡಿಗೆ ಆಗಮಿಸಿದ ಮೃತದೇಹವನ್ನು ಒಂದಷ್ಟು ಸಮಯ ತಡೆದು ನಿಲ್ಲಿಸಿದ ಕಾರ್ಯಕರ್ತರು ಆಂಬ್ಯುಲೆನ್ಸ್‌ನಿಂದ ಮೃತದೇಹವನ್ನು ಹೊರ ತೆಗೆಯಲು ಯತ್ನಿಸಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಮಾತಿಕ ಚಕಮಕಿ ನಡೆಯಿತು. ಇದೇ ವೇಳೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಗುಂಪಿನ ನಡುವೆ ಬೊಬ್ಬೆ ಕೇಳಿ ಬಂದಿದ್ದು ಆಕ್ರೋಶಗೊಂಡ ಕಾರ್ಯಕರ್ತರು ಕಟ್ಟಡ, ಅಂಗಡಿ, ವಾಹನಗಳಿಗೆ ಕಲ್ಲು ತೂರಾಟ ನಡೆಸಿದ್ದಾರೆ.

ವಾಹನಗಳು ಜಖಂ:

ಮೃತದೇಹ ಬಿ.ಸಿ.ರೋಡಿನಿಂದ ಮೆಲ್ಕಾರ್‌ನತ್ತ ತೆರಳುತ್ತಿದ್ದಂತೆಯೇ ಬಿ.ಸಿ.ರೋಡಿನಲ್ಲಿ ಸಂಘಪರಿವಾರದ ಗುಂಪೊಂದು ದಾಂಧಲೆ ನಡೆಸಿದ್ದು, ಮೇಲ್ಸೇತುವೆ ಅಡಿಭಾಗದಲ್ಲಿರಿಸಿದ್ದ ಬೈಕ್‌ಗಳನ್ನು ಜಖಂಗೊಳಿಸಿದೆ. ಇದೇ ವೇಳೆ ಖಾಸಗಿ ಚಾನೆಲ್‌ವೊಂದರ ಕ್ಯಾಮೆರಾಮೆನ್‌ಗೂ ಹಲ್ಲೆ ನಡೆಸಿ ಕ್ಯಾಮೆರಾ ಕಿತ್ತು ಹಾನಿಗೊಳಿಸಿದೆ. ಅಲ್ಲದೆ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ರಿಕ್ಷಾ, ಕಾರು, ಬೈಕ್‌ಗಳನ್ನು ಕೂಡ ಜಖಂಗೊಳಿಸಿದೆ.

ಮುತ್ತಿಗೆ:

ಕೈಕಂಬ ಹಾಗೂ ಬಿ.ಸಿ.ರೋಡಿನಲ್ಲಿ ಕಲ್ಲು ತೂರಾಟ ನಡೆಸಿದ ಸಂಘಪರಿವಾರದ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು ಬಂಟ್ವಾಳ ನಗರ ಠಾಣೆಗೆ ಕರೆದೊಯ್ದಿದ್ದರು. ವಶಕ್ಕೆ ಪಡೆದ ಕಾರ್ಯಕರ್ತರನ್ನು ಬಿಡುಗಡೆಗೊಳಿಸಬೇಕೆಂದು ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರು ಕಾರ್ಯಕರ್ತರೊಂದಿಗೆ ಠಾಣೆಗೆ ಮುತ್ತಿಗೆ ಹಾಕಿರುವ ಪ್ರಸಂಗ ಕೂಡಾ ನಡೆಯಿತು. ಹಾಗೆಯೇ ಪೊಲೀಸರ ವಶದಲ್ಲಿದ್ದ ಇನ್ನೊಂದು ಕೋಮಿನ ಅಮಾಯಕ ಯುವಕರರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ಕೆಲ ಪೋಷಕರು ಠಾಣೆಯಲ್ಲಿ ಅವಲತ್ತು ತೋಡಿಕೊಳ್ಳುತ್ತಿದ್ದ ದೃಶ್ಯ ಕಂಡುಬಂತು.

ವಿಡಿಯೊ ವೈರಲ್:

ಬಿ.ಸಿ.ರೋಡ್ ಸಮೀಪದ ಡಿ.ಪಿ.ಸ್ಟೋರ್ ಎಂಬಲ್ಲಿ ಮೆರವಣಿಗೆಯಲ್ಲಿದ್ದವರು ರಸ್ತೆಬದಿಯಲ್ಲಿದ್ದ ಕಲ್ಲುಗಳನ್ನು ಸಂಗ್ರಹಿಸಿ ಕಾರುಗಳಿಗೆ ತುಂಬಿಸುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೊವೊಂದರಲ್ಲಿ ಪತ್ತೆಯಾಗಿದೆ. ಮೆರವಣಿಗೆಯ ವೇಳೆ ಕಲ್ಲು ತೂರಾಟ ನಡೆಸಿ ಗಲಭೆ ನಡೆಸುವ ಉದ್ದೇಶದಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.

ಅಘೋಷಿತ ಬಂದ್:

ಮೃತದೇಹದ ಮೆರವಣಿಗೆ ವೇಳೆ ಅಹಿತಕರ ಘಟನೆ ನಡೆಯದಂತೆ ಫರಂಗಿಪೇಟೆ, ತುಂಬೆ, ಕೈಕಂಬ, ಬಿ.ಸಿ.ರೋಡ್, ಮೆಲ್ಕಾರ್‌ನಲ್ಲಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದರು. ಕಲ್ಲು ತೂರಾಟ ನಡೆದು ಉದ್ವಿಗ್ನಿಗೊಂಡ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ಮತ್ತು ಕೈಕಂಬದಲ್ಲಿ ಇಡೀ ದಿನ ಸ್ವಯಂ ಘೋಷಿತ ಬಂದ್ ಆಗಿತ್ತು. ಉಳಿದೆಡೆ ಅಂಗಡಿಗಳು ತೆರೆದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News