ಶಾಂತಿ ಕಾಪಾಡಲು ಸಚಿವ ಯು.ಟಿ. ಖಾದರ್ ಮನವಿ
ಮಂಗಳೂರು, ಜು. 8: ದ.ಕ. ಜಿಲ್ಲೆಯ ಸಂಸ್ಕೃತಿ ಉಳಿಸಿ, ಜಿಲ್ಲೆಯಲ್ಲಿ ಶಾಂತಿ ಕಾಪಾಡಲು ಎಲ್ಲಾ ಧಾರ್ಮಿಕ, ರಾಜಕೀಯ ಮುಖಂಡರು ಮಾನವೀಯತೆ ನೆಲೆಯಲ್ಲಿ ಒಂದಾಗಬೇಕು ಎಂದು ಆಹಾರ ಸಚಿವ ಯು.ಟಿ. ಖಾದರ್ ಮನವಿ ಮಾಡಿದ್ದಾರೆ.
ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಕೆಡಿಸಲು ದುಷ್ಕರ್ಮಿಗಳ ಪ್ರಯತ್ನಕ್ಕೆ ಯಶಸ್ಸು ಸಿಗುವುದಿಲ್ಲ. ಎಲ್ಲಾ ಘಟನೆಗಳ ಅಪರಾಧಿಗಳನ್ನು ಪತ್ತೆ ಹಚ್ಚಿ ಶಿಕ್ಷಿಸಲು ಸರಕಾರ ಸನ್ನದ್ಧವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತರಾದ ಇಬ್ಬರೂ ಬೇರೆ ಬೇರೆ ಸಂಘಟನೆಗಳಿಗೆ ಸೇರಿದವರಾದರೂ, ಇಬ್ಬರೂ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಲ್ಲ. ಇಬ್ಬರ ಕುಟುಂಬಗಳಿಗೂ ರಾಜ್ಯ ಸರಕಾರ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಲಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಅಶಾಂತಿ ಸೃಷ್ಟಿಸುವ ಸಂದೇಶಗಳನ್ನು ಹರಡುವವರ ಮೇಲೆ ಪೊಲೀಸ್ ಇಲಾಖೆ ನಿಗಾ ಇಡಬೇಕಿದೆ ಎಂದು ಅವರು ತಿಳಿಸಿದ್ದಾರೆ.
ಡಿವಿ, ಶೋಭಾ ಹೇಳಿಕೆಗೆ ಖಂಡನೆ:
ಜಿಲ್ಲೆಯಲ್ಲಿ ನಡೆದಿರುವ ಘಟನೆಗಳನ್ನು ಮುಂದಿಟ್ಟು ಕೇಂದ್ರ ಸಚಿವ ಸದಾನಂದ ಗೌಡ, ಸಂಸದೆ ಶೋಭಾ ಕರಂದ್ಲಾಜೆ ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ ಶಾಂತಿ ನೆಮ್ಮದಿ ಕಾಪಾಡುವುದು ರಾಜ್ಯ ಸರಕಾರದ ಆದ್ಯತೆಯಾಗಿದೆ. ಮೃತದೇಹ ಮುಂದಿಟ್ಟು ರಾಜಕೀಯ ಲಾಭ ಪಡೆಯುವ ಬಿಜೆಪಿ ಮುಖಂಡರ ಹೇಳಿಕೆಗಳು ಖಂಡನೀಯ. ಬಿಜೆಪಿ ಮುಖಂಡರ ಹೇಳಿಕೆಗಳಿಗೆ ಸೂಕ್ತ ಕಾಲದಲ್ಲಿ ಉತ್ತರಿಸಲಾಗುವುದು ಎಂದು ಸಚಿವ ಖಾದರ್ ತಿಳಿಸಿದ್ದಾರೆ.