ಜು.12: ಉದ್ಯೋಗ ಮೇಳ
ಮಂಗಳೂರು, ಜು.8: ರಥಬೀದಿಯ ಡಾ.ಪಿ.ದಯಾನಂದ ಪೈ- ಪಿ.ಸತೀಶ್ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆಯಾಗಿ 10 ವರ್ಷಗಳನ್ನು ಪೂರೈಸುತ್ತಿದ್ದು, ಕಾಲೇಜಿನ ಕ್ಯಾಂಪಸ್‌ನಲ್ಲಿ ಜು.12ರಂದು ಉದ್ಯೋಗ ಮೇಳ ನಡೆಸಲಾಗುತ್ತದೆ ಎಂದು ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಜೆ.ಆರ್. ಲೋಬೊ ಹೇಳಿದರು.
ಮೇಳದ ಮೂಲಕ ಸಾಕಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ನೀಡುವ ಕೆಲಸ ಈ ಮೂಲಕ ಆಗಲಿದೆ ಎಂದು ಕಾಲೇಜಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.
ಕಾಲೇಜಿಗೆ ಸಾಕಷ್ಟು ದೂರದ ಊರುಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಅವರಿಗೆ ಹಾಸ್ಟೆಲ್ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ. ಇದಕ್ಕಾಗಿ ಹಿಂದುಳಿದ ಕಲ್ಯಾಣ ಇಲಾಖೆಯ ನೆರವು ಪಡೆಯಲಾಗುತ್ತದೆ. ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಸಮಿತಿಯೊಂದನ್ನು ರಚನೆ ಮಾಡಲಾಗಿದೆ. ವಿದ್ಯಾರ್ಥಿಗಳಿಂದ ಪುಟ್ಟ ಮೊತ್ತವನ್ನು ಪಡೆದು ಈ ವ್ಯವಸ್ಥೆಯನ್ನು ಜಾರಿಗೊಳಿಸುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ ಎಂದರು.
ಹೊಸ ಮೂರು ಪಿಜಿ ಕೋರ್ಸ್‌ಗಳ ಆರಂಭ:
ಕ್ಯಾಂಪಸ್‌ನಲ್ಲಿ ಹೊಸ ಕಟ್ಟಡ ರಚನೆಗಾಗಿ ಈಗಾಗಲೇ ದಾನಿಗಳು ಮುಂದೆ ಬಂದಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಕೂಡ ಸಾಕಷ್ಟು ಚುರುಕುತನದಿಂದ ಕೆಲಸ ಮಾಡುತ್ತಿರುವುದರಿಂದ ಕಾಲೇಜು ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಕಂಡಿದೆ. ಎಂಎಸ್‌ಡಬ್ಲ್ಯೂ, ರಾಜಕೀಯ ಶಾಸದಲ್ಲಿ ಎಂ.ಎ ಹಾಗೂ ಕೆಮೆಸ್ಟ್ರಿಯಲ್ಲಿ ಎಂಎಸ್ಸಿ ಕೋರ್ಸ್‌ಗಳನ್ನು ಈ ವರ್ಷದಿಂದ ಜಾರಿಗೆ ತರಲಾಗುತ್ತಿದೆ. ಕಳೆದ ವರ್ಷ ಎಂಕಾಂ ಪಿಜಿ ಕೋರ್ಸ್‌ಗೆ ಅವಕಾಶ ನೀಡಲಾಗಿತ್ತು ಎಂದರು.
ಕಾಲೇಜಿನ ಬಿ.ಕಾಂ, ಬಿಎಸ್ಸಿ, ಬಿಬಿಎಂ ಬಿಸಿಎ, ಸಿಬಿಝೆಡ್, ಬಿಎಸ್‌ಡಬ್ಲ್ಯೂ, ಬಿಎಂಸಿಎಸ್ ಕೋರ್ಸ್‌ಗಳಿಗೆ ಈಗಾಗಲೇ ಸೀಟುಗಳು ತುಂಬುತ್ತಿದೆ. ಜಿಲ್ಲೆಯ 32 ಕಾಲೇಜುಗಳಲ್ಲಿಯೇ ಈ ಕಾಲೇಜಿಗೆ ಅತೀ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಕಾಲೇಜಿಗೆ ನ್ಯಾಕ್ ನಿಯಮದ ಕಳೆದ ವರ್ಷ ಬಿ ಶ್ರೇಣಿಯನ್ನು ಪಡೆದ ಪರಿಣಾಮ ರೂಸಾದಿಂದಲೂ ಕಾಲೇಜಿಗೆ 2 ಕೋಟಿ ರೂ. ಅನುದಾನಕ್ಕೆ ಆಯ್ಕೆಯಾಗಿದೆ.
ಜ್ಞಾನ ಸಂಗಮ ಯೋಜನೆಯ ಮೂಲಕ ಕಾಲೇಜು ಹಾಜರಾತಿಯನ್ನು ಆನ್‌ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಪ್ರೊ. ರಾಜಶೇಖರ್ ಹೆಬ್ಬಾರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.