‘ಸರಕಾರಿ ಬಸ್‌ಗಳಿಗೆ ತಡೆ; ಜನತೆಯ ಸೌಲಭ್ಯಕ್ಕೆ ಕುತ್ತು’
ಉಡುಪಿ, ಜು.8: ಜಿಲ್ಲೆಯ ಗ್ರಾಮೀಣ ಭಾಗದ ಜನತೆಗೆ, ವಿದ್ಯಾರ್ಥಿಗಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಮಹಿಳೆಯರಿಗೆ ಅನುಕೂಲವಾ ಗಲೆಂದು ಶಾಸಕರು ಜಿಲ್ಲೆಯ ಖಾಸಗಿ ಬಸ್ ಸಂಘಟನೆಗಳ ಪ್ರತಿರೋಧ ನಡುವೆಯೂ ತಂದ ಸರಕಾರಿ ನರ್ಮ್ ಬಸ್‌ಗಳ ಓಡಾಟಕ್ಕೆ ಖಾಸಗಿ ಬಸ್ ಮಾಲಕರು ನ್ಯಾಯಾಲಯಿಂದ ತಡೆಯಾಜ್ಞೆ ತಂದಿರುವುದರಿಂದ ಜನತೆಯ ಸೌಲಭ್ಯಕ್ಕೆ ತಡೆಯಾದಂತಾಗಿದೆ ಎಂದು ಕಾಂಗ್ರೆಸ್ ಹೇಳಿದರು.
ಖಾಸಗಿ ಬಸ್ ಮಾಲಕರ ಒಕ್ಕೂಟ ಒಟ್ಟು 55 ಕೆಎಸ್ಸಾರ್ಟಿಸಿ ಬಸ್‌ಗಳ ಓಡಾಟಕ್ಕೆ ತಡೆಯಾಜ್ಞೆ ತಂದಿರುವುದರಿಂದ ಗ್ರಾಮೀಣ ಭಾಗಗಳ ಜನರು ಹಾಗೂ ಶಾಲಾ ಕಾಲೇಜುಗಳಿಗೆ ತೆರಳುವ ಮಕ್ಕಳಿಗೆ ತೊಂದರೆಯಾಗಿದೆ. ಬಸ್ ಸಂಚಾರ ವಿರಳವಿದ್ದೆಡೆ ಹಾಗೂ ಗ್ರಾಮೀಣ ಭಾಗದ ಜನರ ಹಿತಾಸಕ್ತಿಗೋಸ್ಕರ ಬೇಡಿಕೆಯನ್ನು ಅವಲೋಕಿಸಿ ಪ್ರಾರಂಭಿಸಿದ ನರ್ಮ್ ಬಸ್‌ಗಳಿಗೆ ಖಾಸಗಿ ಬಸ್ ಮಾಲಕರು ತಪ್ಪುಮಾಹಿತಿ ನೀಡಿ ತಡೆ ಆದೇಶ ತಂದಿರುವುದು ಸರಿಯಲ್ಲ ಎಂದು ಕಾಂಗ್ರೆಸ್ ವಕ್ತಾರ ಬಾಸ್ಕರ ರಾವ್ ಕಿದಿಯೂರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ಜನರಿಗೆ ಖಾಸಗಿ ಬಸ್ಸುಗಳ ಅಗತ್ಯವೂ ಇದೆ. ಸ್ಪರ್ಧೆಯಿಂದ ಜನತೆಗೆ ಸ್ಪರ್ಧಾತ್ಮಕ ಸೌಲಭ್ಯವೂ ದೊರಕುತ್ತದೆ. ಸರಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸುರಕ್ಷತೆಗೆ ಆದ್ಯತೆ ಹಾಗೂ ಪ್ರಯಾಣ ದರದಲ್ಲಿ ಸಾಕಷ್ಟು ಕಡಿತವಿರುವುದರಿಂದ ಸಾರ್ವಜನಿಕರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಸರಕಾರ ನ್ಯಾಯಾಲಯಕ್ಕೆ ಸೂಕ್ತ ಮಾಹಿತಿ ನೀಡಿ ತಡೆ ಆದೇಶವನ್ನು ತೆರವುಗೊಳಿಸಬೇಕಾಗಿದೆ ಎಂದವರು ಹೇಳಿದ್ದಾರೆ.