ಶಾಂತಿ ಕಾಪಾಡಲು ಮುಸ್ಲಿಮ್ ಒಕ್ಕೂಟ ಮನವಿ
ಉಡುಪಿ, ಜು.8: ಕರಾವಳಿ ಪ್ರದೇಶದಲ್ಲಿ ದಿನದಿಂದ ದಿನಕ್ಕೆ ಆತಂಕದ ವಾತಾವರಣ ಹೆಚ್ಚುತ್ತಿದ್ದು, ಹಿಂಸೆಯ ಪ್ರವೃತ್ತಿ ವಿಜೃಂಭಿಸುತ್ತಿದೆ. ಈಗ ನಡೆಯುತ್ತಿರುವ ಕೋಮು ಹಿಂಸಾಚಾರ ನಿಂತು ಶಾಂತಿ ಹಾಗೂ ಪ್ರೀತಿಯ ಸಮಾಜ ನಿರ್ಮಾಣ ಮಾಡುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಮನವಿ ಮಾಡಿದೆ.
ನಾವೆಲ್ಲರೂ ಒಂದು ಮನುಷ್ಯ ಸಮುದಾಯವಾಗಿದ್ದು, ಈ ದೇಶವನ್ನು ಅಭಿವೃದ್ದಿ ಪಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ದೇಶ ಅಭಿವೃದ್ಧಿ ಹೊಂದಬೇಕಾದರೆ ದೇಶದ ಜನರು ಪರಸ್ಪರ ಸಹೋದರಂತೆ ಬಾಳುವುದು ಅಗತ್ಯವಾಗಿದೆ. ಪರಸ್ಪರ ದ್ವೇಷದ ಜೀವನ ಸಾಗಿಸುವುದರಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಒಕ್ಕೂಟ ತಿಳಿಸಿದೆ.
ನಾವು ಧರ್ಮದ ಹೆಸರು ಬಳಸಿ ಅದರ ವಿರುದ್ಧ ವರ್ತಿಸಿ ಸಮಾಜದಲ್ಲಿ ಆತಂಕ ಸೃಷ್ಠಿಸಿ ಹಿಂಸೆ ಹರಡಿ ಅನಾಥರನ್ನು ಸೃಷ್ಟಿಸುವ, ವಿದವೆಯನ್ನು ಹೆಚ್ಚಿಸುವ, ಮಕ್ಕಳಿಗೆ ತಂದೆ ಇಲ್ಲದ, ಪತ್ನಿಗೆ ಪತಿ ಇಲ್ಲದ, ಎಲ್ಲೆಂದರಲ್ಲಿ ರಕ್ತ ಹರಿಸುವ ಸಂಸ್ಕೃತಿ ನಿರ್ಮಾಣಕ್ಕೆ ಕಾರಣರಾಗುತ್ತಿದ್ದೇವೆ. ಇದೇ ರೀತಿ ಮುಂದುವರೆದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಸಂಭವಿಸುವ ಎಲ್ಲ ಸಾಧ್ಯತೆಗಳಿವೆ ಎಂದು ಒಕ್ಕೂಟ ಆತಂಕ ವ್ಯಕ್ತಪಡಿಸಿದೆ.
ಸರ್ವಧರ್ಮ ದೇಶ ಬಾಂಧವರು ಯಾವುದೇ ರೀತಿಯ ಗಾಳಿ ಸುದ್ದಿಗೆ ಕಿವಿ ಕೊಡದೆ, ಪ್ರಚೋದನೆಯ ಪ್ರಭಾವಕ್ಕೆ ಒಳಗಾಗದೆ ಶಾಂತಿ, ಸಹಬಾಳ್ವೆಯ ಜೀವನ ಸಾಗಿಸಬೇಕಾಗಿದೆ. ಇಲ್ಲದಿದ್ದಲ್ಲಿ ಈ ಕೋಮು ದಳ್ಳುರಿಯಲ್ಲಿ ಎಲ್ಲರೂ ಸುಟ್ಟು ಕರಗಲಾಗುವುದರಲ್ಲಿ ಯಾವುದೇ ಸಂಶಯ ಇಲ್ಲ. ಈ ಹಿಂದೆ ಶಾಂತಿಯ ನೆಲೆಯಾಗಿದ್ದ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಜನರು ಸಹನೆ ವಹಿಸಿ ಶಾಂತಿ ಸ್ಥಾಪಿಸಿ ಈ ದೇಶಕ್ಕೆ ಮಾದರಿಯಾಗಬೇಕು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹುಸೇನ್ ಕೋಡಿಬೆಂಗ್ರೆ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.