ಕನ್ನಡ ಸಿನೆಮಾ: "ಕೋಲಾರ" ರಕ್ತಸಿಕ್ತ ಚರಿತ್ರೆ

Update: 2017-07-09 06:39 GMT

ಉಪೇಂದ್ರ ನಿರ್ದೇಶನದಲ್ಲಿ ಶಿವರಾಜಕುಮಾರ್ ನಟಿಸಿದ್ದ ‘ಓಂ’ ಸಿನೆಮಾದ ಯಶಸ್ಸಿನ ನಂತರ ಸಾಲು, ಸಾಲಾಗಿ ರೌಡಿಯಿಸಂ ಸಿನೆಮಾಗಳು ತಯಾರಾದವು. ಈ ಚಿತ್ರಗಳ ಪೈಕಿ ಕೆಲವಷ್ಟೆ ಯಶಸ್ಸು ಕಂಡದ್ದು. ಇದು ಏಕತಾನತೆ ಎನಿಸುತ್ತಿದ್ದಂತೆ ಇದರ ಮುಂದುವರಿಕೆಯಾಗಿ ಭೂಗತ ಪಾತಕಿಗಳ ಚಿತ್ರಗಳನ್ನು ಡಾಕ್ಯುಮೆಂಟರಿ ಶೈಲಿಗೆ ಒಗ್ಗಿಸಿಕೊಳ್ಳಲಾಯಿತು. ಇದೀಗ ತೆರೆಕಂಡಿರುವ ‘ಕೋಲಾರ’ ಸಿನೆಮಾ ಇದೇ ಶೈಲಿಯದ್ದು. ಇಲ್ಲಿ ನಿರ್ದೇಶಕ ಆರ್ಯ ಮಹೇಶ್ ಕೋಲಾರದ ಪಾತಕಿ ತಂಗಂ ರಕ್ತಸಿಕ್ತ ಬದುಕನ್ನು ತೆರೆಗೆ ತಂದಿದ್ದಾರೆ. ತಮ್ಮ ಪ್ರಯತ್ನದಲ್ಲಿ ಸಂಪೂರ್ಣವಾಗಿ ಅಲ್ಲದಿದ್ದರೂ ತಕ್ಕಮಟ್ಟಿಗೆ ಅವರು ಯಶಸ್ವಿಯಾಗಿದ್ದಾರೆ ಎಂದು ಹೇಳಬಹುದು.

ಬಾಲ್ಯದಲ್ಲಿ ತನಗಾದ ಕೆಟ್ಟ ಅನುಭವಗಳಿಂದಾಗಿ ತಂಗಂ ಪಾತಕಿಯಾಗುತ್ತಾನೆ. ಚಿನ್ನದ ನಾಡು ಕೋಲಾರದಲ್ಲಿ ತಾನೇ ಚಕ್ರವರ್ತಿಯಾಗಿ ಮೆರೆೆಯಬೇಕೆನ್ನುವ ಹಠ ಅವನದ್ದು. ಈ ಹಂತದಲ್ಲಿ ಪೈಪೋಟಿಗಿಳಿಯುವ ಎದುರಾಳಿಗಳನ್ನು ಕೊಚ್ಚುತ್ತಾನೆ. ತನ್ನ ವಿರುದ್ಧ ಸಾಕ್ಷಿ ಹೇಳಲು ಕೋರ್ಟ್‌ಗೆ ಬರುವ ರೌಡಿಯನ್ನು ಕೋರ್ಟ್ ಅಂಗಳದಲ್ಲೇ ಕೊಚ್ಚಿ ಹಾಕುವ ಒಂದು ಭೀಬತ್ಸ ಸನ್ನಿವೇಶವೂ ಇದೆ. ಹೀಗೆ, ತಂಗಂ ಬದುಕಿನ ಕೆಲ ನೈಜ ಫಟನೆಗಳನ್ನು ನಿರ್ದೇಶಕರು ತೆರೆಗೆ ಅಳವಡಿಸಿದ್ದಾರೆ. ಪಾತಕ ಜಗತ್ತಿನ ಕ್ರೌರ್ಯಗಳ ಹಸಿಹಸಿ ಚಿತ್ರಣ ಮನಸಿಗೆ ಕಸಿವಿಸಿ ಉಂಟುಮಾಡಿದರೂ, ಅದು ತಂಗಂ ಬದುಕು ಎನ್ನುವುದನ್ನು ಒಪ್ಪಲೇಬೇಕು. ಇದರ ಮಧ್ಯೆ ವ್ಯವಸ್ಥೆಯಲ್ಲಿನ ದೋಷಗಳೂ ಕತೆಯಲ್ಲಿ ಹಾಸುಹೊಕ್ಕಾಗಿವೆ.
ಚಿನ್ನದ ನಾಡನ್ನು ನಡುಗಿಸಿದ ಪಾತಕಿ ತಂಗಂ ಪಾತ್ರದಲ್ಲಿ ಪೀಚಲು ದೇಹದ ಯೋಗೀಶ್ ಅವರನ್ನು ಕಲ್ಪಿಸಿಕೊಳ್ಳುವುದು ಕಷ್ಟ! ಆದರೆ ಯೋಗೀಶ್ ಉತ್ತಮ ನಟನೆಯಿಂದ ಇದನ್ನು ಸರಿದೂಗಿಸಲು ಯತ್ನಿಸಿದ್ದಾರೆ. ನಾಯಕಿ ನೈನಾ ನಟನೆಯಲ್ಲಿನ್ನೂ ಪಳಗಬೇಕು. ಪಾತಕಗಳಿಂದ ಜನರನ್ನು ಹೆದರಿಸಿಕೊಂಡು ಮೆರೆಯುವ ಬದುಕು ನೀಚತನದ್ದು ಎನ್ನುವ ಸಂದೇಶವನ್ನೇನೋ ದಾಟಿಸಲಾಗಿದೆ. ಆದರೆ ಇದರ ಹಿನ್ನೆಲೆಯಲ್ಲಿ ತೆರೆಯ ಮೇಲೆ ತೋರಿಸುವ ಹಿಂಸೆ, ಕ್ರೌರ್ಯವನ್ನು ನೋಡುವುದು ಕಷ್ಟವಾಗುತ್ತದೆ. ನಿರ್ದೇಶಕರು ಚಿತ್ರಕ್ಕೆ ಡಾಕ್ಯುಮೆಂಟರಿ ಗುಣವನ್ನು ಲೇಪಿಸಲು ಯತ್ನಿಸಿದ್ದಾರೆ. ಇದರಿಂದಾಗಿ ಚಿತ್ರ ಕೆಲವೊಮ್ಮೆ ನಿಧಾನಗತಿ ಪಡೆದುಕೊಂಡು ಪ್ರೇಕ್ಷಕರ ತಾಳ್ಮೆ ಪರೀಕ್ಷಿಸುತ್ತದೆ. ಮತ್ತಷ್ಟು ಹೋಂವರ್ಕ್ ಮಾಡಿಕೊಂಡಿದ್ದಿದ್ದರೆ ಚಿತ್ರವನ್ನು ಸಹನೀಯವಾಗಿಸುವ ಸಾಧ್ಯತೆಗಳಿದ್ದವು.

ನಿರ್ದೇಶನ: ಆರ್ಯ ಎಂ. ಮಹೇಶ್, ನಿರ್ಮಾಣ: ಲಕ್ಷ್ಮೀನಾರಾಯಣ, ಸಂಗೀತ: ಬಿ.ಆರ್.ಹೇಮಂತ್‌ಕುಮಾರ್, ತಾರಾಗಣ: ಯೋಗೇಶ್, ನೈನಾ ಸರ್ವಾರ್, ಮಹೇಶ್, ಆದಿತ್ಯ, ನೀನಾಸಂ ಅಶ್ವಥ್ ಮತ್ತಿತರರು.
ರೇಟಿಂಗ್ - **1/2

Writer - ಶಶಿಧರ ಚಿತ್ರದುರ್ಗ

contributor

Editor - ಶಶಿಧರ ಚಿತ್ರದುರ್ಗ

contributor

Similar News