ಸುಶ್ಮಾ ಸ್ವರಾಜ್ ಸಹಾಯ ಯಾಚಿಸಿದ ಕ್ಯಾನ್ಸರ್ ಪೀಡಿತ ಪಾಕ್ ಮಹಿಳೆ
ಇಸ್ಲಾಮಾಬಾದ್, ಜು.9: ಕ್ಯಾನ್ಸರ್‌ನಿಂದ ಬಳಲುತ್ತಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಭಾರತಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆಯಲು ಮೆಡಿಕಲ್ ವೀಸಾದ ನಿರೀಕ್ಷೆಯಲ್ಲಿದ್ದು, ಸಹಾಯಕ್ಕಾಗಿ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ಮೊರೆ ಹೋಗಿದ್ದಾರೆ.
ಪಾಕ್‌ನ 25ರ ಹರೆಯದ ಫೈಝಾ ತನ್ವೀರ್ ಎಂಬ ಮಹಿಳೆ ಮೆಡಿಕಲ್ ವೀಸಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಅವರ ಅರ್ಜಿಯನ್ನು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ತಿರಸ್ಕರಿಸಿದೆ.
ಫೈಝಾ ತನ್ವೀರ್ ಗಾಝಿಯಾಬಾದ್‌ನಲ್ಲಿರುವ ಇಂದ್ರಪ್ರಸ್ಥ ಡೆಂಟಲ್ ಕಾಲೇಜ್ ಹಾಗೂ ಆಸ್ಪತ್ರೆಗೆ(ಐಡಿಸಿಎಚ್)ಭೇಟಿ ನೀಡುವ ಯೋಜನೆ ಹಾಕಿಕೊಂಡಿದ್ದು, ಕ್ಯಾನ್ಸರ್ ಚಿಕಿತ್ಸೆಗೆ ಈಗಾಗಲೇ 10 ಲಕ್ಷ ರೂ. ಮುಂಗಡ ಮೊತ್ತ ನೀಡಿದ್ದಾರೆ. ಆದರೆ, ಭಾರತಕ್ಕೆ ಬರಲು ಅವರಿಗೆ ಸಾಧ್ಯವಾಗುತ್ತಿಲ್ಲ. ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈ ಕಮಿಶನ್ ಫೈಝಾ ಸಲ್ಲಿಸಿರುವ ಮೆಡಿಕಲ್ ವೀಸಾವನ್ನು ತಿರಸ್ಕರಿಸುವುದೇ ಇದಕ್ಕೆ ಕಾರಣ ಎಂದು ಮೂಲವೊಂದು ತಿಳಿಸಿದೆ.
ಉಭಯ ದೇಶಗಳ ನಡುವೆ ಸ್ನೇಹ-ಭಾಂದವ್ಯ ಹದೆಗಟ್ಟಿರುವ ಹಿನ್ನೆಲೆಯಲ್ಲಿ ಮಗಳು ಸಲ್ಲಿಸಿರುವ ವೀಸಾ ಅರ್ಜಿ ತಿರಸ್ಕತವಾಗಿದೆ ಎಂದು ಫೈಝಾ ತನ್ವೀರ್‌ರ ತಾಯಿ ಹೇಳಿದ್ದಾರೆ.
ವೀಸಾ ಪಡೆಯಲು ವಿಫಲವಾಗಿರುವ ಫೈಝಾ ತನ್ವೀರ್ ನೆರವಿಗಾಗಿ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ. ಕಳೆದ ಕೆಲವು ದಿನಗಳಿಂದ ಟ್ವಿಟರ್‌ನಲ್ಲಿ ಮನವಿ ಮಾಡಿಕೊಳ್ಳುತ್ತಿರುವ ಪಾಕ್ ಮಹಿಳೆ ಈ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ ಭಾರತದ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ ನೆರವನ್ನು ಯಾಚಿಸಿದ್ದಾರೆ.
ಫೈಝಾ ತನ್ವೀರ್ ಎಮೆಲೊಬ್ಲಾಸ್ಟೊಮ ಎನ್ನುವ ಬಾಯಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದು ಬಾಯಿಯಲ್ಲಿ ಕ್ಯಾನ್ಸರ್ ಗಡ್ಡೆ ಬೆಳೆದಿದೆ. ತನ್ನ ಬಾಯಿಯಲ್ಲಿರುವ ಕ್ಯಾನ್ಸರ್‌ಗಡ್ಡಯ ಫೋಟೊವನ್ನು ಟ್ವಿಟರ್ ಪೇಜ್‌ನಲ್ಲಿ ಹಾಕಿರುವ ತನ್ವೀರ್ ಸುಶ್ಮಾಜೀ, ದಯವಿಟ್ಟು ನನ್ನ ಜೀವ ಉಳಿಸಲು ನೆರವಾಗಿ. ನನಗೆ ದಯವಿಟ್ಟ್ಟು ಸಹಾಯ ಮಾಡಿ ಎಂದು ಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಪಾಕಿಸ್ತಾನ ಮೂಲದ ಮಗುವೊಂದಕ್ಕೆ ತುರ್ತು ಹೃದಯ ಶಸ್ತ್ರಚಿಕಿತ್ಸೆಗಾಗಿ ವೀಸಾವನ್ನು ನೀಡಲಾಗಿತ್ತು. ಸುಶ್ಮಾ ಸ್ವರಾಜ್ ಮಧ್ಯಪ್ರವೇಶದಿಂದ ಮಗುವಿನ ಹೆತ್ತವರಿಗೆ ವೀಸಾವನ್ನು ನೀಡಲಾಗಿತ್ತು.