×
Ad

ಯೋಗ ಉಚಿತ-ಆರೋಗ್ಯ ಖಚಿತ: ರಾಘವೇಂದ್ರ ರಾವ್

Update: 2017-07-09 16:54 IST

ಮುಲ್ಕಿ, ಜು. 9: ನಾವು ಮಾಡುವ ಯಾವುದೇ ಕೆಲಸಕ್ಕೆ ಫಲಿತಾಂಶ ಸಿಕ್ಕೇ ಸಿಗುತ್ತದೆ. ದಿನನಿತ್ಯ ಯೋಗ ಮಾಡಿ ಆರೋಗ್ಯ ರಕ್ಷಿಸಿ. ಹಲವೆಡೆ ಇರುವ ಉಚಿತ ಯೋಗ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಆರೋಗ್ಯವಂತರಾಗಿ ಎಂದು ಯೋಗ ಗುರು ರಾಘವೇಂದ್ರ ರಾವ್ ಹೇಳಿದರು.

ಮುಲ್ಕಿ ಬಪ್ಪನಾಡು ಶ್ರೀ ದುರ್ಗಾ ಪರಮೇಶ್ವರೀ ದೇವಳದ ಶ್ರೀ ಅನ್ನಪೂರ್ಣೇಶ್ವರೀ ಸಭಾಂಗಣದಲ್ಲಿ ಕಳೆದ ಮೂರು ವರ್ಷಗಳಿಂದ ಉಚಿತ ಯೋಗ ಶಿಬಿರ ಆಯೋಜಿಸಿಕೊಂಡು ಬಂದಿರುವ ಬಪ್ಪನಾಡು ಶ್ರೀ ಪತಂಜಲಿ ಯೋಗ ಶಿಬಿರ ಮತ್ತು ಕೊಳಚಿಕಂಬಳ ಘಟಕದ ವತಿಯಿಂದ ನಡೆದ ಗುರು ಪೌರ್ಣಿಮಾ ಕಾರ್ಯಕ್ರಮದಲ್ಲಿ ಶಿಬಿರಾರ್ಥಿಗಳಿಂದ ಗುರುವಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಮನಸ್ಸು ಮತ್ತು ದೇಹವನ್ನು ಒಂದುಗೂಡಿಸುವುದೇ ಯೋಗ. ಎಲ್ಲರೂ ಒಗ್ಗಟ್ಟಾಗಿ ಯೋಗ ಮಾಡುವುದರಿಂದ ಸಂಘಟನೆಯೂ ಬೆಳೆಯುತ್ತದೆ. ಸಮಾಜವೂ ಅಭಿವೃದ್ಧಿಯಾಗುತ್ತದೆ. ನಾವೆಲ್ಲರೂ ಆರೋಗ್ಯವಂತರಾಗಿ ಬಾಳುವುದೂ ಸಾಧ್ಯವಾಗುತ್ತದೆ ಎಂದವರು ಹೇಳಿದರು.

ಗುರುವಂದನೆ: ಇದೇ ವೇಳೆ ಕಳೆದ 3 ವರ್ಷಗಳಿಂದ ನಿರಂತರವಾಗಿ ಮುಲ್ಕಿ ಹಾಗೂ ಆಸುಪಾಸಿನಲ್ಲಿ ಉಚಿತ ಯೋಗ ಶಿಬಿರ ನಡೆಸುತ್ತಾ ಬಂದಿರುವ ರಾಘವೇಂದ್ರ ರಾವ್‌ ರನ್ನು ಶಿಬಿರಾರ್ಥಿಗಳ ಪರವಾಗಿ ಶಿವಣ್ಣ ಶೆಟ್ಟಿ ಬಪ್ಪನಾಡುಗುತ್ತು, ಉದಯ ಶೆಟ್ಟಿ, ವಾರಿಜಾ ವಿ. ಪುತ್ರನ್ ಸನ್ಮಾನಿಸಿ ಗೌರವಿಸಿದರು. ಬಳಿಕ ಶಿಬಿರಾರ್ಥಿಗಳು ಗುರು ವಂದನೆ ನಡೆಸಿದರು. ಈ ಸಂದರ್ಭ ಸಹ ಗುರುಗಳಾದ ಸತೀಶ್ ಬೈಂದೂರುರವರಿಗೂ ಗುರು ವಂದನೆ ಮೂಲಕ ಗೌರವಿಸಲಾಯಿತು.

ಶಿಬಿರಾರ್ಥಿಗಳ ಪರವಾಗಿ ರವೀಂದ್ರ ಶೆಟ್ಟಿ, ಆಶಾ ಶಿವರಾಮ್, ಕುಸುಮಾ ಶೆಟ್ಟಿ, ಸತೀಶ್ ಬೈಂದೂರು ಅನಿಸಿಕೆ ವ್ಯಕ್ತಪಡಿಸಿದರು.
ಪ್ರಕಾಶ್ ಕೆ. ಪ್ರಸ್ತಾವಿಸಿದರು. ಬಪ್ಪನಾಡು ಶ್ರೀ ಪತಂಜಲಿ ಯೋಗ ಶಿಬಿರದ ಅಧ್ಯಕ್ಷ ಶಾಂತಾರಾಮ್ ಉಪಸ್ಥಿತರಿದ್ದರು. ಸದಾನಂದ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News