ಪಠ್ಯ ಪುಸ್ತಕ ವಿತರಣೆಯಲ್ಲಿ ವಿಳಂಬ: ವಿದ್ಯಾರ್ಥಿಗಳು, ಶಿಕ್ಷಕರ ಪರದಾಟ
ಮಡಿಕೇರಿ ಜು.9: ಶಾಲೆಗಳು ಆರಂಭಗೊಂಡು ಒಂದೂವರೆ ತಿಂಗಳಾದರೂ ಗ್ರಾಮೀಣ ಪ್ರದೇಶದ ಅನೇಕ ಶಾಲೆಗಳಿಗೆ ಪಠ್ಯಪುಸ್ತಕ ವಿತರಣೆಯಾಗದೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾದ ದಿನದಿಂದಲೇ ಪಠ್ಯ ಚಟುವಟಿಕೆಗಳು ನಡೆಯಬೇಕೆನ್ನುವ ಆದೇಶ ಶಿಕ್ಷಣ ಇಲಾಖೆಗಳಿಂದಿತ್ತು. ಆದರೆ ಸಕಾಲದಲ್ಲಿ ಪಠ್ಯ ಪುಸ್ತಕಗಳು ವಿತರಣೆಯಾಗದೆ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅಡಚಣೆಯಾಗಿದೆ.
ಪಠ್ಯಪುಸ್ತಕಗಳಿಗಾಗಿ ಶಿಕ್ಷಕರು ತಮ್ಮ ಪಾಠ ಪ್ರವಚಗಳನ್ನು ಬಿಟ್ಟು ಎರಡು ಮೂರು ಬಾರಿ ಇಲಾಖೆಯ ಪುಸ್ತಕ ವಿತರಣಾ ಕೇಂದ್ರಕ್ಕೆ ಅಲೆಯಬೇಕಾದ ಪರಿಸ್ಥಿತಿ ಬಂದೊದಗಿದೆ. ಪ್ರೌಢಶಾಲೆಯ ಎಲ್ಲಾ ತರಗತಿಗಳ ಒಂದೆರಡು ಪುಸ್ತಕಗಳು ಇನ್ನೂ ವಿತರಣೆಯಾಗಿಲ್ಲ. ಜೊತೆಗೆ ವಿದ್ಯಾರ್ಥಿಗಳ ಭವಿಷ್ಯವನ್ನು ನಿರ್ಧರಿಸುವ ಹತ್ತನೇ ತರಗತಿಯ ಪಠ್ಯ ಪುಸ್ತಕ ಕೂಡ ವಿದ್ಯಾರ್ಥಿಗಳ ಕೈಸೇರಿಲ್ಲ.
ಈಗಾಗಲೇ ಕನಿಷ್ಠ ಎರಡು ಪಾಠಗಳು ಮುಗಿಯಬೇಕಾಗಿತ್ತು. ಆದರೆ ಶಿಕ್ಷಣ ಇಲಾಖೆಯ ವಿಳಂಬ ಧೋರಣೆಯಿಂದ ಪಠ್ಯ ಪುಸ್ತಕಗಳಿಲ್ಲದೆ ವಿದ್ಯಾರ್ಜನೆಯಲ್ಲಿ ಪ್ರಗತಿ ಕಾಣುತ್ತಿಲ್ಲ. ಶಿಕ್ಷಣ ಅಧಿಕಾರಿಗಳು ಸರಕಾರದ ಪರವೇ ಸಮರ್ಥನೆ ನೀಡುತ್ತಿದ್ದು, ಶೇ.10 ರಷ್ಟು ಪಠ್ಯಪುಸ್ತಕಗಳು ಮಾತ್ರ ವಿತರಣೆಗೆ ಬಾಕಿ ಇದೆ ಎಂದು ಹೇಳುತ್ತಿದ್ದಾರೆ. ಆದರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರುಗಳು ಪಠ್ಯಪುಸ್ತಕಗಳ ಅಸಮರ್ಪಕ ವಿತರಣೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.