×
Ad

ಶರತ್ ಮಡಿವಾಳ ಹತ್ಯೆ ಪ್ರಕರಣ: ಆರೋಪಿಗಳ ಬಗ್ಗೆ ಮಹತ್ವದ ಸುಳಿವು ಲಭ್ಯ; ಐಜಿಪಿ

Update: 2017-07-09 18:05 IST

ಬಂಟ್ವಾಳ, ಜು. 9: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸ್ ತನಿಖೆ ತೀವ್ರಗೊಳಿಸಿದ್ದು ಸಾಕಷ್ಟು ಮಹತ್ವದ ಸುಳಿವೂ ದೊರೆತಿದೆ. ಆರೋಪಿಗಳನ್ನು ಶೀಘ್ರವೇ ಕಾನೂನಿನಡಿಯಲ್ಲಿ ಶಿಕ್ಷೆಗೊಳಪಡಿಸಲಾಗುವುದು ಎಂದು ಪಶ್ಚಿಮ ವಲಯ ಐಜಿಪಿ ಪಿ.ಹರಿಶೇಖರನ್ ತಿಳಿಸಿದ್ದಾರೆ.

ಬಂಟ್ವಾಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಶಾಂತವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ 1000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಕ್ರಮ ನಡೆಯದಂತೆ ಜಾಗೃತಿ ವಹಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ 26 ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು ಪ್ರತೀ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಸಮಾಜ ದ್ರೋಹಿ ಚಟುವಟಿಕೆ ನಡೆಸಿದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಗುಂಪು ಸೇರಿ ಗಲಾಟೆ ಮಾಡಿದರೆ ಮುಲಾಜಿಯಿಲ್ಲದೆ ಲಾಠಿ ಪ್ರಯೋಗ ಮಾಡಲು ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಗತ್ಯ ಬಿದ್ದರೆ ಆಶ್ರುವಾಯು ಪ್ರಯೋಗಿಸಲು ಸೂಚನೆ ನೀಡಲಾಗಿದೆ ಎಂದವರು ತಿಳಿಸಿದರು.

ಶನಿವಾರ ನಡೆದ ಶರತ್ ಶವಯಾತ್ರೆಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯ ಸಂಪೂರ್ಣ ವೀಡಿಯೊ ಚಿತ್ರೀಕರಣ ಇಲಾಖೆ ಬಳಿ ಇದೆ. ಹೀಗಾಗಿ ಶೀಘ್ರ ಅವರನ್ನೆಲ್ಲಾ ಬಂಧಿಸುವುದಾಗಿ ತಿಳಿಸಿದ ಅವರು, ಯಾವುದೇ ಕಾರಣಕ್ಕೂ ಅಮಾಯಕರನ್ನು ಬಂಧಿಸುವುದಿಲ್ಲ. ಅಹಿತಕರ ಘಟನೆಯಲ್ಲಿ ಭಾಗಿಯಾದ 13 ಮಂದಿಯನ್ನು ಈಗಾಗಲೇ ಬಂಧಿಸಲಾಗಿದ್ದು ನ್ಯಾಯಲಯಕ್ಕೆ ಹಾಜರುಪಡಿಸಲಾಗುವುದು ಎಂದವರು ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ, ಸುಳ್ಳು ಮೆಸೇಜ್‌ಗಳನ್ನು ಕಳುಹಿಸುವವರ ಪತ್ತೆ ಹಚ್ಚಲು ಪ್ರತ್ಯೇಕ ಸೈಬರ್ ಸೆಲ್ ತಂಡ ರಚಿಸಲಾಗಿದೆ. ವಾಟ್ಸ್‌ಅಪ್‌ನಲ್ಲಿ ಪ್ರಚೋಧನಕಾರಿ ಮೆಸೇಜ್ ಯಾರು ಕಳುಹಿಸಿದರೂ ಅಡಿಮಿನ್ ಹೊಣೆಯಾಗುತ್ತಾನೆ ಎಂದು ಅವರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News