ಸಂತ ತೆರೆಸಾರ ನೀಲಿ ಅಂಚಿನ ಸೀರೆ ಈಗ ಮಿಷನರೀಸ್ ಆಫ್ ಚ್ಯಾರಿಟಿಯ ಬೌದ್ಧಿಕ ಆಸ್ತಿ
ಕೋಲ್ಕತಾ,ಜು.9: ವ್ಯಾಟಿಕನ್‌ನಿಂದ ಕಲಕತ್ತಾದ ಸಂತ ತೆರೆಸಾ ಪಟ್ಟಕ್ಕೆ ಏರಿಸಲ್ಪಟ್ಟಿರುವ ಮದರ್ ತೆರೆಸಾರ ಪ್ರಸಿದ್ಧ ನೀಲಿ ಅಂಚಿನ ಸೀರೆಗೆ ಮಿಷನರೀಸ್ ಆಫ್ ಚ್ಯಾರಿಟಿಯ ಬೌದ್ಧಿಕ ಆಸ್ತಿಯೆಂದು ಭಾರತ ಸರಕಾರದ ಟ್ರೇಡ್ ಮಾರ್ಕ್ಸ್ ರಿಜಿಸ್ಟ್ರಿಯು ಮಾನ್ಯತೆಯನ್ನು ನೀಡಿದೆ.
ತೆರೆಸಾ ಅವರು ಸದಾ ಧರಿಸುತ್ತಿದ್ದ ಬಿಳಿಯ ಸೀರೆಯು ಮೂರು ನೀಲಿ ಬಣ್ಣದ ಅಂಚುಗಳನ್ನು ಹೊಂದಿದ್ದು, ಹೊರಗಿನ ಅಂಚು ಇತರ ಅಂಚುಗಳಿಗಿಂತ ಅಗಲವಾಗಿ ರುತ್ತಿತ್ತು.
ಇಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಬೌದ್ಧಿಕ ಆಸ್ತಿ ಅಟಾರ್ನಿ ಬಿಸ್ವಜಿತ್ ಸರ್ಕಾರ್ ಅವರು, ತೆರೆಸಾ ಅವರು ಸಂತ ಪದವಿಗೇರಿದ 2016,ಸೆ.4ರಂದು ಮಿಷನರೀಸ್ ಆಫ್ ಚ್ಯಾರಿಟಿಯ ನನ್‌ಗಳು ಧರಿಸುತ್ತಿರುವ ಸೀರೆಯ ಮೇಲಿನ ನೀಲಿ ವಿನ್ಯಾಸದ ಅಂಚು ಬೌದ್ಧಿಕ ಆಸ್ತಿಯೆಂದು ಮನ್ನಣೆ ಲಭಿಸಿದೆ ಎಂದರು.
ಮಿಷನರೀಸ್ ಆಫ್ ಚ್ಯಾರಿಟಿ ಪ್ರಚಾರದಲ್ಲಿ ಆಸಕ್ತಿ ಹೊಂದಿಲ್ಲ, ಹೀಗಾಗಿ ಈ ವಿಷಯ ವನ್ನು ಸುದ್ದಿ ಮಾಡಿರಲಿಲ್ಲ. ಆದರೆ ಈ ಸೀರೆ ವಿಶ್ವಾದ್ಯಂತ ದುರ್ಬಳಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಟ್ರೇಡ್‌ಮಾರ್ಕ್ ಕುರಿತು ಜನರಲ್ಲಿ ಅರಿವು ಮೂಡಿಸಲು ನಾವೀಗ ಪ್ರಯತ್ನಿಸುತ್ತಿದ್ದೇವೆ ಎಂದರು.
ಮಿಷನರೀಸ್ ಆಫ್ ಚ್ಯಾರಿಟಿಯ ನನ್‌ಗಳು ಧರಿಸುತ್ತಿರುವ ನೀಲಿ ಅಂಚಿನ ಬಿಳಿಯ ಸೀರೆಗಳ ಬಳಕೆಯ ವಿಶಿಷ್ಟ ಹಕ್ಕು ಅದ್ವಿತೀಯವಾಗಿದ್ದು, ಇದೇ ಮೊದಲ ಬಾರಿಗೆ ಸಮವಸ್ತ್ರವೊಂದಕ್ಕೆ ಬೌದ್ಧಿಕ ಹಕ್ಕುಗಳ ಕಾಯ್ದೆಯ ರಕ್ಷಣೆ ದೊರಕಿದೆ ಎಂದು ಸರ್ಕಾರ್ ತಿಳಿಸಿದರು.
ಉತ್ತರ 24 ಪರಗಣಗಳ ಜಿಲ್ಲೆಯ ಟಿಟಾಗಡದಲ್ಲಿರುವ ಮಿಷನರೀಸ್ ಆಫ್ ಚ್ಯಾರಿಟಿಯ ಗಾಂಧೀಜಿ ಪ್ರೇಮ್ ನಿವಾಸದಲ್ಲಿ ವರ್ಷಕ್ಕೆ ಸುಮಾರು 4000 ಇಂತಹ ಸೀರೆಗಳನ್ನು ನೇಯಲಾಗುತ್ತಿದ್ದು, ಅವುಗಳನ್ನು ವಿಶ್ಯಾದ್ಯಂತವಿರುವ ಸಂಸ್ಥೆಯ ನನ್‌ಗಳಿಗೆ ವಿತರಿಸಲಾಗುತ್ತದೆ.