ಹೆಣ್ಣುಮಕ್ಕಳ ಪಾಲನೆ ಕೇಂದ್ರ ‘ಪ್ಲಾನೆಟ್ ಮಾರ್ಸ್ ಫೌಂಡೇಶನ್’ ಉದ್ಘಾಟನೆ
ಉಡುಪಿ, ಜು.9: ಸಮಾಜದ ಅನಾಥ ಹಾಗೂ ಬಡ ಹೆಣ್ಣು ಮಕ್ಕಳ ಪಾಲನೆ ಹಾಗೂ ಪೋಷಣೆಯ ಉದ್ದೇಶದಿಂದ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಹಿಂಭಾಗದ ಕೋಟೆ ಲಿಂಕ್ ರಸ್ತೆಯಲ್ಲಿ ಆರಂಭಿಸಲಾಗಿರುವ ಪ್ಲಾನೆಟ್ ಮಾರ್ಸ್ ಫೌಂಡೇಶನ್‌ನ್ನು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವಿವಾರ ಉದ್ಘಾಟಿಸಿದರು.
ಇಂದು ಹೆಣ್ಣು ಮಕ್ಕಳನ್ನು ಶೋಷಣೆ ಮಾಡುವ ಹಾಗೂ ಕೆಟ್ಟ ದೃಷ್ಠಿಯಿಂದ ನೋಡುವ ಸಮಾಜದಲ್ಲಿಯೂ ಅವರಿಗೆ ಶಕ್ತಿ, ಭವಿಷ್ಯ, ಬದುಕು ನೀಡುವ ಸಂಸ್ಥೆಗಳು ಆರಂಭವಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇದು ದೇವರ ಹಾಗೂ ಪುಣ್ಯದ ಕೆಲಸ ಎಂದು ಸಚಿವರು ಹೇಳಿದರು.
ಮುಖ್ಯ ಅತಿಥಿ ಗಳಾಗಿ ಜಿಪಂ ಸದಸ್ಯ ಜನಾರ್ದನ ತೋನ್ಸೆ, ತಾಪಂ ಸದಸ್ಯ ಧನಂಜಯ ಕುಂದರ್, ಕಲ್ಯಾಣಪುರ ಗ್ರಾಪಂ ಅಧ್ಯಕ್ಷೆ ಪುಷ್ಪಾ ಎಸ್.ಕೋಟ್ಯಾನ್, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷ ಬಿ.ಕೆ.ನಾರಾಯಣ, ಮಾಜಿ ತಾಪಂ ಸದಸ್ಯೆ ವರೋನಿಕಾ ಕರ್ನೆಲಿಯೋ, ರಾಜ್ಯ ಕರಾಟೆ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು ಉಪಸ್ಥಿತರಿದ್ದರು.
ಅಧ್ಯಕ್ಷತೆಯನ್ನು ಸಂಸ್ಥೆಯ ಸಂಸ್ಥಾಪಕಿ ರಕ್ಷಾ ವಹಿಸಿದ್ದರು. ಅಧ್ಯಕ್ಷೆ ದೀಪ್ತಿ ಸಚಿನ್ ಸುವರ್ಣ ಸ್ವಾಗತಿಸಿದರು. ಕಾರ್ಯದರ್ಶಿ ರೋಶ್ಲಿನ್ ಕ್ರಾಸ್ತಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಟ್ರಸ್ಟಿ ಹರೀಶ್ ಕೋಟ್ಯಾನ್ ವಂದಿಸಿದರು. ಮುರಳೀಧರ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.