×
Ad

ಅಲೆವೂರಿನಲ್ಲಿ ‘ಕೆಸರ್ಡ್‌ ಒಂಜಿ ದಿನ’ ಗ್ರಾಮೀಣ ಕ್ರೀಡೋತ್ಸವ

Update: 2017-07-09 19:30 IST

ಉಡುಪಿ, ಜು.9: ಅಲೆವೂರು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಉಡುಪಿ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ 12ನೆ ವರ್ಷದ ಗ್ರಾಮೀಣ ಕ್ರೀಡೋತ್ಸವ ‘ಕೆಸರ್ಡ್‌ ಒಂಜಿ ದಿನ’ ಕಾರ್ಯಕ್ರಮವನ್ನು ರವಿವಾರ ಅಲೆವೂರು ಜೋಡುಕಟ್ಟೆಯ ದೊಡ್ಡಮನೆ ಗದ್ದೆಯಲ್ಲಿ ಆಯೋಜಿಸಲಾಗಿತ್ತು.

ಕ್ರೀಡಾಕೂಟವನ್ನು ಉದ್ಘಾಟಿಸಿದ ಕಾಪು ಶಾಸಕ ವಿನಯಕುಮಾರ್ ಸೊರಕೆ ಮಾತನಾಡಿ, ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಲು ಗ್ರಾಮೀಣ ಕ್ರೀಡೆ ಸಹಕಾರಿ. ಗ್ರಾಮೀಣ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಮುಂದಿನ ದಿನಗಳಲ್ಲಿ ಗ್ರಾಮೀಣ ಕ್ರೀಡಾಕೂಟಕ್ಕೂ ಸರಕಾರದಿಂದ ಅನುದಾನ ನೀಡಲು ಪ್ರಯತ್ನಿಸಲಾಗುವುದು. ಹಾಗೆಯೇ ಸರಕಾರದ ವತಿಯಿಂದಲೂ ಕೆಸರ್ಡ್‌ ಗದ್ದೆ ಓಟದಂತಹ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸುವ ಚಿಂತನೆ ಇದೆ ಎಂದರು.

ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಶುಭಹಾರೈಸಿದರು. ಅಲೆವೂರು ಗ್ರಾಪಂ ಅಧ್ಯಕ್ಷ ಶ್ರೀಕಾಂತ್ ನಾಯಕ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಸಮಿತಿಯ ಗೌರವಾಧ್ಯಕ್ಷ ಹರೀಶ್ ಕಿಣಿ, ಅಧ್ಯಕ್ಷ ಉಮೇಶ್ ಪೂಜಾರಿ, ಉದ್ಯಮಿ ಶ್ರೀಧರ ಶೆಟ್ಟಿ ಉಪಸ್ಥಿತರಿದ್ದರು.

ಕ್ರೀಡಾಕೂಟದಲ್ಲಿ ಕೆಸರು ಗದ್ದೆ ಓಟ, ಹಗ್ಗ ಜಗ್ಗಾಟ, ಹಿಮ್ಮುಖ ಓಟ, ಮೂರು ಕಾಲು ಓಟ, ಸಂಗೀತ ಕುರ್ಚಿ, ಲಗೋರಿ, ಮಡಿಕೆ ಒಡಿಯುವ ಸ್ಪರ್ಧೆ, ಗೋಣಿಚೀಲ ಓಟ ಮೊದಲಾದ ಗ್ರಾಮೀಣ ಕ್ರೀಡೆಗಳನ್ನು ಏರ್ಪಡಿಸ ಲಾಗಿತ್ತು. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲ ವಯೋಮಾನದವರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News