×
Ad

ಅಪರಾಧಿಗೆ ಮರಣದಂಡನೆ ವಿಧಿಸಿ: ಜುನೈದ್ ಕುಟುಂಬ ಒತ್ತಾಯ

Update: 2017-07-09 20:05 IST

ಬಲ್ಲಾಭ್‌ಗಢ್, ಜು. 9: ಅಪರಾಧಿಗೆ ಮರಣ ದಂಡನೆ ವಿಧಿಸುವಂತೆ ರೈಲಿನಲ್ಲಿ ಗುಂಪು ದಾಳಿಗೆ ಒಳಗಾಗಿ ಹತ್ಯೆಗೀಡಾದ ಜುನೈದ್‌ನ ಕುಟುಂಬದವರು ಒತ್ತಾಯಿಸಿದ್ದಾರೆ.

ಅಪರಾಧಿಗಳಿಗೆ ಮರಣ ದಂಡನೆ ವಿಧಿಸುವಂತೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದ ಇತರ ಆರೋಪಿಗಳನ್ನು ಬಂಧಿಸುವಂತೆ ನಾವು ಸರಕಾರವನ್ನು ಆಗ್ರಹಿಸುತ್ತೇವೆ. ಇಂತಹ ಘಟನೆಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿ ದಿನ ನಡೆಯುತ್ತಿದೆ ನಾವು ಆತಂಕದಿಂದ ಬದುಕುತ್ತಿದ್ದೇವೆ ಎಂದು ಜುನೈದ್‌ನ ತಂದೆ ಜಲಾಲುದ್ದೀನ್ ಹೇಳಿದ್ದಾರೆ.

ಘಟನೆ ಸಂದರ್ಭ ಹಲ್ಲೆಗೊಳಗಾದ ಜುನೈದ್ ಸಹೋದರ ಶಕೀರ್, ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿರುವುದನ್ನು ನಮ್ಮ ಕುಟುಂಬ ಪ್ರಶಂಶಿಸುತ್ತದೆ ಎಂದಿದ್ದಾರೆ.

ಪ್ರಕರಣದ ಆರೋಪಿಗಳು ಹಾಗೂ ಪ್ರಧಾನ ಆರೋಪಿಯನ್ನು ಬಂಧಿಸಿರುವ ಕ್ರಮವನ್ನು ನಾನು ಪ್ರಶಂಸಿಸುತ್ತೇನೆ. ಜಾತಿ ಹಾಗೂ ಧರ್ಮದ ಕಾರಣಕ್ಕೆ ಗುಂಪು ಹಿಂಸೆ ನಡೆಯುತ್ತಿರುವುದರಿಂದ ಭಾರತದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ ಎಂದು ಶಕೀರ್ ಹೇಳಿದ್ದಾರೆ.

 ಬಲ್ಲಾಭ್‌ಗಢದಲ್ಲಿ ರೈಲಿನಲ್ಲಿ ಗುಂಪು ಹಲ್ಲೆ ನಡೆಸಿ ಜುನೈದ್‌ನ ಸಾವಿಗೆ ಕಾರಣನಾದ ಆರೋಪಿಯನ್ನು ಹರ್ಯಾಣ ಪೊಲೀಸರು ಶನಿವಾರ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಬಂಧಿಸಿದ್ದರು. ಹಾಗೂ ಆತನನ್ನು ಇಂದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು.

ಹತ್ಯೆ ಬಳಿಕ ಮಹಾರಾಷ್ಟ್ರದಲ್ಲಿ ಕೆಲಸಕ್ಕೆ ಸೇರಿದ ಆರೋಪಿ

ಫರಿದಾಬಾದ್: ಹರಿಯಾಣದ ರೈಲಿನಲ್ಲಿ ಜುನೈದ್ ಖಾನ್‌ನನ್ನು ಹತ್ಯೆಗೈದ ಬಳಿಕ 30ರ ಹರೆಯ ವ್ಯಕ್ತಿ ಮಹಾರಾಷ್ಟ್ರದ ಧುಲೆಯ ಕಾರ್ಖಾನೆಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

   ಜುನೈದ್‌ನನ್ನು ಹತ್ಯೆಗೈದ ಬಳಿಕ ಪರಾರಿಯಾಗಿದ್ದ ಆತ ಮಥುರಾ ಹಾಗೂ ವೃಂದಾವನದಲ್ಲಿರುವ ತನ್ನ ಸಂಬಂಧಿಕರ ಮನೆಗೆ ತೆರಳಿದ್ದ. ಅನಂತರ ಮಹಾರಾಷ್ಟ್ರ ದಲ್ಲಿರುವ ಸಂಬಂಧಿಕರನ್ನು ಸಂಪರ್ಕಿಸಿದ್ದ. ಅವರ ನೆರವಿನಿಂದ ಕಾರ್ಖಾನೆಯಲ್ಲಿ ಉದ್ಯೋಗ ಪಡೆದುಕೊಳ್ಳಲು ನಿರಂತರ ಸಂಪರ್ಕದಲ್ಲಿದ್ದ. ಕೃತ್ಯ ಎಸಗುವ ಮುನ್ನ ಆತ ದಿಲ್ಲಿಯಲ್ಲಿ ಭದ್ರತಾ ಸಿಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ಹರಿಯಾಣ ರೈಲ್ವೇ ಪೊಲೀಸ್‌ನ ಕಮಲ್‌ದೀಪ್ ಗೋಯಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News