ಕಳ್ಳಭಟ್ಟಿ ಸೇವನೆ: ಮೃತರ ಸಂಖ್ಯೆ 21ಕ್ಕೇರಿಕೆ
ವಾರಣಾಸಿ, ಜು. 9: ಉತ್ತರಪ್ರದೇಶದ ವಾರಣಾಸಿಯಲ್ಲಿ ಶುಕ್ರವಾರ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ ರವಿವಾರದ ವರೆಗೆ ಮೃತಪಟ್ಟವರ ಸಂಖ್ಯೆ 21ಕ್ಕೇರಿದೆ. ಆದರೆ, ಕಳ್ಳಭಟ್ಟಿ ಸೇವಿಸಿ ಮೃತಪಟ್ಟವರ ಸಂಖ್ಯೆ 12 ಎಂದು ಅಝಮ್‌ಗಢ ಸ್ಥಳೀಯಾಡಳಿತ ದೃಢಪಡಿಸಿದೆ.
ಅಝಮ್‌ಗಢ ಪೊಲೀಸರು ಶನಿವಾರ ರಾತ್ರಿ ಕಳ್ಳಭಟ್ಟಿ ತಯಾರಿ ಹಾಗೂ ಮಾರಾಟದ ಸ್ಥಳಗಳಿಗೆ ದಾಳಿ ನಡೆಸಿದರು. ಈ ಸಂದರ್ಭ ಕಳ್ಳಭಟ್ಟಿ ತಯಾರಿಸುವ ಘಟಕ ಬೆಳಕಿಗೆ ಬಂದಿತ್ತು. ಒಂಬತ್ತು ಮಂದಿಯನ್ನು ಬಂಧಿಸಲಾಗಿತ್ತು. ಬಂಧಿತರ ವಿರುದ್ಧ 272 ಸೇರಿದಂತೆ ಐಪಿಸಿ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಗ್ಯಾಂಗ್‌ಸ್ಟರ್ ಕಾಯ್ದೆ ಅಡಿಯಲ್ಲೂ ಪ್ರಕರಣ ದಾಖಲಿಸುವ ಚಿಂತನೆ ನಡೆಯುತ್ತಿದೆ ಎಂದು ಅಝಮ್‌ಗಢ ಎಸ್‌ಪಿ ಎ.ಕೆ. ಶಾನಿ ತಿಳಿಸಿದ್ದಾರೆ.
ಈಗಾಗಲೇ ಆರಂಭವಾಗಿರುವ ಪರಿಹಾರ ವಿತರಣೆಗೆ ಅಂದಾಜು ಪ್ರಕ್ರಿಯೆಗೆ ಹಾಗೂ ನ್ಯಾಯಾಂಗ ತನಿಖೆಗೆ ಜಿಲ್ಲಾ ನ್ಯಾಯಾಧೀಶ ಚಂದ್ರಭೂಷಣ್ ಸಿಂಗ್ ಆದೇಶಿಸಿದ್ದಾರೆ.
ತೀವ್ರ ಅಸ್ವಸ್ಥತೆ ಹಿನ್ನೆಲೆಯಲ್ಲಿ ಶನಿವಾರ ಎಸ್‌ಎಎಸ್‌ಎಲ್ ಆಸ್ಪತ್ರೆಗೆ ದಾಖಲಿಸಲಾದ ಅಝಮ್‌ಗಢದ ಬದ್ರಿ ರಾಜ್‌ಭಾರ್ (55) ರವಿವಾರ ಮೃತಪಟ್ಟಿದ್ದಾರೆ. ಕಳ್ಳಭಟ್ಟಿ ಸೇವಿಸಿದ ಪರಿಣಾಮ ಅಝಮ್‌ಗಢ ಜಿಲ್ಲೆಯ ರೌಣಾಪುರ ಪೊಲೀಸ್ ಠಾಣಾ ವ್ಯಪ್ತಿಯ ಕೇವಟಾಹಿಯಾ ಹಾಗೂ ಸಮೀಪದ ಗ್ರಾಮಗಳಲ್ಲಿನ 9 ಮಂದಿ ನಿವಾಸಿಗಳು ಶುಕ್ರವಾರ ಸಂಜೆ ಮೃತಪಟ್ಟಿದ್ದರು. ಹಾಗೂ ಹಲವರು ಚಿಂತಾಜನಕ ಸ್ಥಿತಿಯಲ್ಲಿದ್ದರು. ಅಂದು ತಡ ರಾತ್ರಿ ಇಬ್ಬರು ಮೃತಪಟ್ಟರು. ಶನಿವಾರ ಮತ್ತೆ ಆರು ಮಂದಿ ಮೃತಪಟ್ಟರು.
ಚಿಂತಾಜನಕ ಸ್ಥಿತಿಯಲ್ಲಿರುವ ಇಬ್ಬರನ್ನು ವಾರಣಾಸಿಯ ಬನಾರಸ ಹಿಂದೂ ವಿ.ವಿ. ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ ಎಂದು ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ. ಜಿ.ಎಲ್ ಕೇಶರ್ವಾಣಿ ತಿಳಿಸಿದ್ದಾರೆ.
ಶುಕ್ರವಾರದಿಂದ ಜಿಯಾನ್‌ಪುರ್ ಹಾಗೂ ರೌನಾಪುರಂ ಪ್ರದೇಶದಲ್ಲಿ 13 ಮಂದಿ ಮೃತಪಟ್ಟಿದ್ದಾರೆ. ಆದರೆ, ನಮಗೆ ಒಟ್ಟು 16 ಮಂದಿ ಮೃತಪಟ್ಟಿರುವ ಬಗ್ಗೆ ಮಾಹಿತಿ ಇದೆ. ಇಬ್ಬರು ಅನಾರೋಗ್ಯದಿಂದ ತಮ್ಮ ಮನೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ನ್ಯಾಯಾಧೀಶ ಚಂದ್ರಭೂಷಣ್ ಸಿಂಗ್ ತಿಳಿಸಿದ್ದಾರೆ. 17 ಮಂದಿ ಮೃತಪಟ್ಟ ಬಗ್ಗೆ ಪ್ರಶ್ನಿಸಿದಾಗ, ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ. ಹಲವು ಸಾವುಗಳು ಅನಾರೋಗ್ಯ ಹಾಗೂ ಇತರ ಕಾರಣಗಳಿಂದ ಸಂಭವಿಸಿವೆ. ಈ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ ಎಂದು ಅವರು ಹೇಳಿದರು.