×
Ad

ಕಾಸರಗೋಡಿನಲ್ಲಿ ಸಪ್ತಸ್ವರ ಕೇಂದ್ರ ಆರಂಭಿಸಲು ಪ್ರಾಮಾಣಿಕ ಪ್ರಯತ್ನ: ಶಾಸಕ ಎನ್.ಎ. ನೆಲ್ಲಿಕುನ್ನು

Update: 2017-07-09 21:17 IST

ಕಾಸರಗೋಡು, ಜು. 9: ವಿಭಿನ್ನ ಕಲೆ, ಸಂಸ್ಕೃತಿಗಳ ಊರಾದ ಕಾಸರಗೋಡಿನಲ್ಲಿ ಸಪ್ತಸ್ವರ ಕೇಂದ್ರ ಆರಂಭಿಸಲು ಪ್ರಾಮಾಣಿಕ ಪ್ರಯತ್ನ  ನಡೆಸಲಾಗುವುದು ಎಂದು ಕಾಸರಗೋಡು ಶಾಸಕ ಎನ್. ಎ ನೆಲ್ಲಿಕುನ್ನು  ಹೇಳಿದರು .

ಅವರು ರವಿವಾರ ಕಾಸರಗೋಡು  ಸರಕಾರಿ ಕಾಲೇಜಿನ  ಯಕ್ಷಗಾನ ಸಂಶೋಧನಾ ಕೇಂದ್ರದ  ಸಹಯೋಗದಲ್ಲಿ  ಒಂದು ತಿಂಗಳ ಕಾಲ  ಎಡನೀರು ಮಠದಲ್ಲಿ  ಯಕ್ಷಗಾನ  ತರಬೇತಿ ಶಿಬಿರದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಂಸ್ಕೃತಿಯನ್ನು ಒಗ್ಗೂಡಿಸುವ ಪ್ರಯತ್ನ ನಡೆಯಬೇಕಿದೆ.  ಯಕ್ಷಗಾನ, ಮಾಪಿಳ್ಳೆಪ್ಪಾಟ್ ಸೇರಿದಂತೆ ಎಲ್ಲಾ ಕಲೆಗಳನ್ನು ಒಂದೇ ವೇದಿಕೆಯಲ್ಲಿ ಆಸ್ವಾದಿಸುವ ಅವಕಾಶ ಪ್ರೇಕ್ಷಕರಿಗೆ ಲಭಿಸಬೇಕು.  ಸಪ್ತಸ್ವರ ಕೇಂದ್ರ  ಸ್ಥಾಪಿಸಲು  ರಾಜ್ಯ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಸಚಿವರು ಹೇಳಿದರು.

ಕಾಸರಗೋಡು ಸರಕಾರಿ  ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ . ಟಿ. ವಿನಯನ್  ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ  ಹೆಚ್ಚುವರಿ ದಂಡಾಧಿಕಾರಿ  ಕೆ . ಅಂಬುಜಾಕ್ಷನ್, ನಗರಸಭಾ ಅಧ್ಯಕ್ಷೆ  ಬೀಫಾತಿಮ್ಮ ಇಬ್ರಾಹಿಂ ,   ನಗರಸಭಾ ಸದಸ್ಯೆ  ಸವಿತಾ ಕೆ .,  ಮಂಜೇಶ್ವರ ಗೋವಿಂದ ಪೈ  ಸ್ಮಾರಕ ಕೇಂದ್ರವಾದ ಗಿಳಿವಿಂಡು  ಸ್ಮಾರಕ ಭವನದ ಸಂಯೋಜನಾಧಿಕಾರಿ  ಡಾ. ಕೆ . ಕಮಲಾಕ್ಷ ,  ನಾಟ್ಯಗುರು ದಿವಾಣ ಶಿವಶಂಕರ ಭಟ್ , ಸಬ್ಬಣ್ಣಕೋಡಿ ರಾಮ ಭಟ್ , ಯಕ್ಷಗಾನ ಸಂಶೋಧನಾ ಕೇಂದ್ರದ ಸಂಯೋಜನಾಧಿಕಾರಿ  ಡಾ. ರತ್ನಾಕರ ಮಲ್ಲಮೂಲೆ ಮೊದಲಾದವರು ಮಾತನಾಡಿದರು .
ನ್ಯಾಯವಾದಿ ಅಡೂರು ಉಮೇಶ್ ನಾಯ್ಕ್ , ಪುರುಷೋತ್ತಮ ಮಾಸ್ಟರ್  ಮೊದಲಾದವರು ಉಪಸ್ಥಿತರಿದ್ದರು. ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಡಾ . ರತ್ನಾಕರ ಮಲ್ಲಮೂಲೆ ಸ್ವಾಗತಿಸಿ , ಡಾ . ರಾಜೇಶ್ ಬೆಜ್ಜಂಗಳ ವಂದಿಸಿದರು.
 

ಯಕ್ಷಗಾನದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಶೈಕ್ಷಣಿಕ ಮಟ್ಟದಲ್ಲಿ ನಡೆದ  ಒಂದು  ತಿಂಗಳ ತರಬೇತಿಯಲ್ಲಿ  33 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದರಲ್ಲಿ 23 ವಿದ್ಯಾರ್ಥಿನಿಯರು ಎಂಬುದು ಗಮನಾರ್ಹ . ಎಡನೀರು ಮಠದಲ್ಲಿ  ನಡೆದ ತರಬೇತಿಯಲ್ಲಿ  ದಿವಾಣ ಶಿವಶಂಕರ್ ಭಟ್ ಮತ್ತು ಸಬ್ಬಣ್ಣಕೋಡಿ ರಾಮ ಭಟ್ ನಾಟ್ಯ ತರಬೇತಿ ಕಲಿಸಿದ್ದು, 33 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿದರು.
 

ಯಕ್ಷಗಾನದ ನಾಟ್ಯ , ತಾಳ , ಉಪನ್ಯಾಸ  ಸಂವಾದ, ಪ್ರಾತ್ಯಕ್ಷಿಕೆ , ಬಣ್ಣಗಾರಿಕೆ, ಭಾಗವತಿಕೆ , ಅರ್ಥಗಾರಿಕೆ ಮೊದಲಾದ ತರಬೇತಿ ನೀಡುವ ಮೂಲಕ ಅಕಾಡಮಿಕ್ ಸ್ಪರ್ಶ ನೀಡಲಾಗುತ್ತಿದ್ದು, ಜಿಲ್ಲಾಡಳಿತ, ಕಾಸರಗೋಡು ಸರಕಾರಿ ಕಾಲೇಜಿನ ಯಕ್ಷಗಾನ ಸಂಶೋಧನಾ ಕೇಂದ್ರದ ಮೂಲಕ ಹೊಸ ಇತಿಹಾಸ ಸ್ರಷ್ಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News