ಉತ್ತರಾಖಂಡದ ಪಟ್ಟಣದಲ್ಲಿ ಕೋಮು ಉದ್ವಿಗ್ನತೆ

Update: 2017-07-09 16:56 GMT

ಡೆಹ್ರಾಡೂನ್,ಜು.9: ಕೇದಾರನಾಥ್ ಮಂದಿರದ ಅವಹೇಳನಕಾರಿ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದ ಗಢ್ವಾಲ್ ಜಿಲ್ಲೆಯ ಸಾತ್ಪುಲಿ ಪಟ್ಟಣದ ಅಪ್ರಾಪ್ತ ವಯಸ್ಕ ಬಾಲಕನೋರ್ವನ ಕುಟುಂಬಕ್ಕೆ ಸೇರಿದ್ದ ತರಕಾರಿ ಅಂಗಡಿಯೊಂದನ್ನು ಬಜರಂಗ ದಳ ಮತ್ತು ಇತರ ಬಲಪಂಥೀಯ ಸಂಘಟನೆಗಳ ಕಾರ್ಯಕರ್ತರು ರವಿವಾರ ಧ್ವಂಸಗೊಳಿಸಿದ್ದು, ಪ್ರದೇಶದಲ್ಲಿ ಕೋಮು ಉದ್ವಿಗ್ನತೆ ಭುಗಿಲೆದ್ದಿದೆ.

ಪರಿಸ್ಥಿತಿಯನ್ನು ನಿಯಂತ್ರಿಸಲು ಸಾತ್ಪುಲಿಗೆ ಹೆಚ್ಚುವರಿ ಪೊಲಿಸ್ ಪಡೆಗಳನ್ನು ರವಾನಿಸಲಾಗಿದೆ ಎಂದು ತಿಳಿಸಿದ ಎಸ್‌ಪಿ ಜಗತ್‌ರಾಮ ಜೋಶಿ ಅವರು, ಫೇಸ್‌ಬುಕ್ ಪೋಸ್ಟ್‌ನ್ನು ಶೇರ್ ಮಾಡಿದ್ದ ಬಾಲಕನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಮೂಲತ ಈ ಚಿತ್ರವನ್ನು ಪೋಸ್ಟ್ ಮಾಡಿದ್ದ ವ್ಯಕ್ತಿಯ ಬಂಧನಕ್ಕಾಗಿ ಮತ್ತು ಪರಿಸ್ಥಿತಿಯನ್ನು ಸಹಜಗೊಳಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದರು.

ಅಂಗಡಿಗೆ ನುಗ್ಗಿದ ಹಲವಾರು ಬಲಪಂಥೀಯ ಕಾರ್ಯಕರ್ತರು ತರಕಾರಿ ಪೆಟ್ಟಿಗೆ ಗಳನ್ನು ಸುಟ್ಟುಹಾಕಿದ್ದಲ್ಲದೆ, ಹಿಂದು ಪರ ಘೋಣೆಗಳನ್ನು ಕೂಗುತ್ತಿದ್ದರು. ಅಂಗಡಿ ಬಿಟ್ಟು ಪರಾರಿಯಾಗಿದ್ದ ಮಾಲಿಕನಿಗಾಗಿ ಅವರು ಹುಡುಕಾಡುತ್ತಿದ್ದರು ಎಂದು ಪ್ರತ್ಯಕ್ಷದರ್ಶಿ ಪವನ್ ನೇಗಿ ತಿಳಿಸಿದರು.
ತಪ್ಪಿತಸ್ಥನನ್ನು ಬಂಧಿಸುವವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಬಜರಂಗ ದಳದ ಕಾರ್ಯಕರ್ತನೋರ್ವ ಹೇಳಿದ.

ಡೆಹ್ರಾಡೂನ್‌ನಿಂದ ಸುಮಾರು 150 ಕಿ.ಮೀ.ಅಂತರದಲ್ಲಿರುವ ಸಾತ್ಪುಲಿ ಈವರೆಗೆ ಕೋಮು ಉದ್ವಿಗ್ನತೆಯನ್ನು ಕಂಡಿರಲಿಲ್ಲ. ಸುದೀರ್ಘ ಕಾಲದಿಂದ ಐದು ಮುಸ್ಲಿಂ ಕುಟುಂಬಗಳು ಅಲ್ಲಿ ಶಾಂತಿಯಿಂದ ಬದುಕುತ್ತಿವೆ ಎಂದು ಎಸ್‌ಪಿ ಹೇಳಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News