ತೇಜಸ್ವಿ ರಾಜೀನಾಮೆಯಿಲ್ಲ: ಆರ್‌ಜೆಡಿ

Update: 2017-07-10 12:51 GMT

ಪಾಟ್ನಾ,ಜು.10: ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ ಅವರ ಕಿರಿಯ ಪುತ್ರ ತೇಜಸ್ವಿ ಯಾದವ ಅವರು ರಾಜ್ಯದ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಸೋಮವಾರ ತನ್ನ ಶಾಸಕಾಂಗ ಪಕ್ಷದ ಸಭೆಯ ಬಳಿಕ ಆರ್‌ಜೆಡಿ ಸ್ಪಷ್ಟಪಡಿಸಿದೆ. ಕಳೆದ ಶುಕ್ರವಾರ ಭ್ರಷ್ಟಾಚಾರದ ಆರೋಪದಲ್ಲಿ ತೇಜಸ್ವಿ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಅವರು ವಾಸವಿರುವ ಕುಟುಂಬದ ನಿವಾಸದ ಮೇಲೆ ದಾಳಿ ನಡೆಸಿತ್ತು.

ಆರ್‌ಜೆಡಿಯ ನಿರ್ಧಾರ ಹೊರಗೆ ಬಿದ್ದ ಬೆನ್ನಿಗೇ ಹಿರಿಯ ಜೆಡಿಯು ನಾಯಕರು ಮುಖ್ಯಮಂತ್ರಿ ನಿತೀಶ ಕುಮಾರ್ ಅವರ ಅಧಿಕೃತ ನಿವಾಸಕ್ಕೆ ಧಾವಿಸುತ್ತಿದ್ದುದು ಕಂಡು ಬಂದಿತ್ತು. ಭ್ರಷ್ಟಾಚಾರದ ಆರೋಪದಲ್ಲಿ ತೇಜಸ್ವಿ ವಿರುದ್ಧ ಸಿಬಿಐ ದಾಳಿಗಳ ಕುರಿತಂತೆ ಕುಮಾರ್ ಅವರ ಮುಂದಿನ ನಡೆಯನ್ನೇ ಎಲ್ಲರೂ ಕಾಯುತ್ತಿದ್ದಾರೆ. ಈವರೆಗೂ ಅವರು ಯಾವದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಜೆಡಿಯು ಕೋರ್ ಸಮಿತಿಯು ಮಂಗಳವಾರ ಸಭೆ ಸೇರಲಿದ್ದು, ಅಲ್ಲಿ ಕುಮಾರ್ ನಿರ್ಧಾರವೊಂದನ್ನು ಕೈಗೊಳ್ಳಬಹುದು ಎಂದು ರಾಜಕೀಯ ವೀಕ್ಷಕರು ನಿರೀಕ್ಷಿಸಿದ್ದಾರೆ.

ತನ್ಮಧ್ಯೆ ತೇಜಸ್ವಿ ತನ್ನ ಹುದ್ದೆಗೆ ರಾಜೀನಾಮೆ ನೀಡದಿದ್ದರೆ ಪಕ್ಷವು ಆಂದೋಲನವನ್ನು ಆರಂಭಿಸಲಿದೆ ಮತ್ತು ಅವರ ಹಗರಣವನ್ನು ಜನರಿಗೆ ತಿಳಿಸಲು ಹಳ್ಳಿಗಳಿಗೂ ಆಂದೋಲನವನ್ನು ಒಯ್ಯುವುದಾಗಿ ಬಿಜೆಪಿಯು ಹೇಳಿದೆ.

ಸಿಬಿಐ ದಾಳಿ ಬಿಹಾರದಲ್ಲಿಯ ಮಹಾ ಮೈತ್ರಿಕೂಟವನ್ನು ಅಸ್ಥಿರಗೊಳಿಸುವ ಸಂಚಾಗಿದೆ. ಈ ದಿನಗಳಲ್ಲಿ ಬಿಜೆಪಿಯ ವಿರುದ್ಧ ಧ್ವನಿಯೆತ್ತುವವರು ಕೇಂದ್ರ ಸರಕಾರದ ಇಂತಹ ಬೆದರಿಕೆ ಕ್ರಮಗಳನ್ನು ಎದುರಿಸಬೇಕಾಗಿದೆ. ನಾವು ಬಿಜೆಪಿ ವಿರುದ್ಧ ಹೊರಾಡುತ್ತೇವೆ ಮತ್ತು ಅವರನ್ನು ಅಧಿಕಾರದಿಂದ ಓಡಿಸುತ್ತೇವೆ ಎಂದು ಹಿರಿಯ ಆರ್‌ಜೆಡಿ ನಾಯಕ ಹಾಗು ರಾಜ್ಯದ ಹಣಕಾಸು ಸಚಿವ ಅಬ್ದುಲ್ ಬಾರಿ ಸಿದ್ದಿಕಿ ಅವರು ಶಾಸಕಾಂಗ ಪಕ್ಷದ ಸಭೆಯ ಬಳಿಕ ಸುದ್ದಿಗಾರರಿಗೆ ತಿಳಿಸಿದರು.

ಸಭೆಯಲ್ಲಿ ತೇಜಸ್ವಿಯವರ ರಾಜೀನಾಮೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಅವರು ನಮ್ಮ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅವರೇಕೆ ರಾಜೀನಾಮೆ ನೀಡಬೇಕು ಎಂದು ಪ್ರಶ್ನಿಸಿದ ಸಿದ್ದಿಕಿ, ತನ್ನ ಪಕ್ಷವು ಆ.27ರಂದು ಹಮ್ಮಿಕೊಂಡಿರುವ ‘ಬಿಜೆಪಿ ಹಟಾವೊ,ದೇಶ ಬಚಾವೋ’ ಬೃಹತ್ ರ್ಯಾಲಿಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News