×
Ad

ಡಿವಿ ಸದಾನಂದ ಗೌಡ ಮೊಸಳೆ ಕಣ್ಣೀರು ಸುರಿಸುವುದು ಬೇಡ: ಜೆಡಿಎಸ್ ವಕ್ತಾರ ಭೋಜೆ ಗೌಡ

Update: 2017-07-10 18:34 IST

ಮಂಗಳೂರು, ಜು.10: ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಇತ್ತೀಚೆಗೆ ಹತ್ಯೆಗೀಡಾದ ಶರತ್ ಮಡಿವಾಳರ ಮನೆಗೆ ತೆರಳಿ ಶರತ್‌ರ ತಂದೆಯ ದು:ಖ ನನ್ನ ನೋವನ್ನು ಇಮ್ಮಡಿಗೊಳಿಸಿದೆ ಎಂದು ಮೊಸಳೆ ಕಣ್ಣೀರು ಸುರಿಸಿದ್ದಾರೆ. ಜಿಲ್ಲೆಯಲ್ಲಿ ಈಗಾಗಲೆ ಸಾಕಷ್ಟು ಮತೀಯ ಗಲಭೆಗಳು, ಹತ್ಯೆಗಳಾಗಿವೆ. ಆವಾಗಲೇ ಡಿ.ವಿ. ಸದಾನಂದ ಗೌಡರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಜರಗಿಸಿದ್ದರೆ ಶರತ್ ಮಡಿವಾಳರಂತಹ ಯುವಕರ ಕೊಲೆಯಾಗುತ್ತಿರಲಿಲ್ಲ. ಕೊಲೆಯಾದ ಬಳಿಕ ಮೊಸಳೆ ಕಣ್ಣೀರು ಸುರಿಸುವ ಅಗತ್ಯವಿಲ್ಲ ಎಂದು ರಾಜ್ಯ ಜನತಾ ದಳ ವಕ್ತಾರ ಭೋಜೆ ಗೌಡ ಹೇಳಿದರು.

ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷವು ರಾಜಕೀಯಕ್ಕಾಗಿ ಇಂತಹ ಗಲಭೆಗಳಿಗೆ ಕುಮ್ಮಕ್ಕು ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಇತ್ತೀಚೆಗೆ ಜಿಲ್ಲೆಗೆ ಭೇಟಿ ನೀಡಿ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡರೇ ವಿನ: ಶಾಂತಿ ಸಭೆ ನಡೆಸಿಲ್ಲ. ಜಿಲ್ಲಾಡಳಿತ, ಪೊಲೀಸ್ ಇಲಾಖೆಯ ಜೊತೆ ಚರ್ಚೆ ನಡೆಸಿಲ್ಲ. ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಶಾಂತಿ ಸಭೆಯಿಂದ ಮುಜುಗರವಾಗುವ ಸನ್ನಿವೇಶ ಎದುರಾಗುವುದಿದ್ದರೆ ಅದನ್ನು ತಪ್ಪಿಸಲು ರಾಜ್ಯದ ಹಿರಿಯ ಸಚಿವರ ನೇತೃತ್ವದಲ್ಲಿ ಶಾಂತಿ ಸಭೆ ನಡೆಸಬಹುದಿತ್ತು ಎಂದರು.

ಈಗಾಗಲೆ ಬಂಟ್ವಾಳ, ಬಿ.ಸಿ.ರೋಡ್, ಕಲ್ಲಡ್ಕದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಮಹಿಳೆಯರು, ಮಕ್ಕಳ ಸಹಿತ ಜನರು ಭಯದ ವಾತಾವರಣದಲ್ಲಿದ್ದಾರೆ. ಇಂತಹ ಸಂದರ್ಭ ಸಂಸದೆ ಶೋಭಾ ಕರಂದ್ಲಾಜೆ ವೀರಾವೇಶದ ಮಾತುಗಳನ್ನಾಡುವ ಬದಲು ಶಾಂತಿಯತ್ತ ಚಿತ್ತ ಹರಿಸಲಿ ಎಂದು ಭೋಜೆ ಗೌಡ ಹೇಳಿದರು.

ಬಿಜೆಪಿ ಗೋಹತ್ಯೆಯ ವಿಚಾರದಲ್ಲಿ ರಾಜಕೀಯ ಮಾಡುತ್ತಿದೆ. ಗೋ ರಕ್ಷಣೆಯ ಹೆಸರಿನಲ್ಲಿ ಸ್ವಯಂ ಘೋಷಿತ ಗೋರಕ್ಷಕರು ಮಾನವ ಹತ್ಯೆ ಮಾಡುತ್ತಿದ್ದಾರೆ. ಇವರಿಗೆ ಒಂದೇ ಒಂದು ಗೋವನ್ನು ಸಾಕಿ, ಸಲಹಿ ಗೊತ್ತಿಲ್ಲ. ಮೊದಲು ಇವರು ಗೋವುಗಳನ್ನು ಸಾಕಲಿ. ಬಳಿಕ ಗೋಹತ್ಯೆ ತಡೆಯಲಿ. ಕೇಂದ್ರದ ಬಿಜೆಪಿ ಸರಕಾರ ಗೋಹತ್ಯೆ ನಿಷೇಧ ಮಸೂದೆಯನ್ನು ಮತ್ತೊಮ್ಮೆ ಪರಾಮರ್ಶಿಸಲಿ ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಅಮರನಾಥ ಶೆಟ್ಟಿ, ಜೆಡಿಎಸ್ ದ.ಕ. ಜಿಲ್ಲಾಧ್ಯಕ್ಷ ವಿಟ್ಲ ಮುಹಮ್ಮದ್ ಕುಂಞಿ, ಉಡುಪಿ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಪಕ್ಷದ ಮುಖಂಡರಾದ ಎಂ.ಬಿ.ಸದಾಶಿವ, ಅಕ್ಷಿತ್ ಸುವರ್ಣ, ಕಾರ್ಪೊರೇಟರ್ ಅಝೀಝ್ ಕುದ್ರೋಳಿ, ರಮೀಝಾ ನಾಸರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News