ಸಂಘಪರಿವಾರದ ಮುಖಂಡರ ಕೇಸು ವಾಪಸ್ ಪಡೆಯದಿದ್ದರೆ ಹೋರಾಟ: ಹಿಂಜಾವೇ
ಮಂಗಳೂರು, ಜು.10: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರ ಮೃತದೇಹ ಮೆರವಣಿಗೆ ಸಂದರ್ಭ ನಡೆದ ಕಲ್ಲುತೂರಾಟಕ್ಕೆ ಸಂಬಂಧಿಸಿ ಬಂಟ್ವಾಳ ಪೊಲೀಸರು ಸತ್ಯಜಿತ್ ಸುರತ್ಕಲ್ ಸಹಿತ ಐವರ ಮೇಲೆ ದಾಖಲಿಸಿರುವ ಕೊಲೆಯತ್ನ ಪ್ರಕರಣವನ್ನು ವಾಪಸ್ ಪಡೆಯದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಹಿಂದೂ ಜಾಗರಣ ವೇದಿಕೆಯ ದ.ಕ.ಜಿಲ್ಲಾ ಘಟಕ ಎಚ್ಚರಿಸಿದೆ.
ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಹಿಂಜಾವೇ ಅಧ್ಯಕ್ಷ ಕಿಶೋರ್ ಕುಮಾರ್ ಜಿಲ್ಲಾ ಪೊಲೀಸ್ ಇಲಾಖೆ ಕಾಂಗ್ರೆಸ್ ಸರಕಾರದ ಅನತಿಯಂತೆ ನಡೆಯುತ್ತಿದೆ. ಮುಸ್ಲಿಂ ಮೂಲಭೂತವಾದಿಗಳ ವಿರುದ್ಧ ಮೃದುಧೋರಣೆ ತಾಳಿದೆ. ಹಿಂದೂಗಳ ಮೇಲೆ ನಿರಂತರ ದಾಳಿಯಾಗುತ್ತಿದ್ದರೂ ಆರೋಪಿಗಳನ್ನು ಬಂಧಿಸಲು ವಿಫಲವಾಗಿದೆ ಎಂದರು.
ಮಹಿಳಾ ಪೊಲೀಸರಿಲ್ಲದೆ ದಾಳಿ:
ಸತ್ಯಜಿತ್ ಸುರತ್ಕಲ್ ಅವರನ್ನು ಬಂಧಿಸುವ ಸಲುವಾಗಿ ಸುಮಾರು 50 ಮಂದಿಯನ್ನು ಒಳಗೊಂಡ ಪೊಲೀಸರು ದಾಳಿ ನಡೆಸಿದ್ದಾರೆ. ಮನೆಯಲ್ಲಿ ನಾನು ಮತ್ತು ನನ್ನಿಬ್ಬರು ಮಕ್ಕಳು ಹಾಗೂ ಸಂಬಂಧಿ ಮಹಿಳೆ ಮತ್ತವರ ಸಣ್ಣ ಮಗು ಮಾತ್ರ ಇದ್ದೆವು. ರಾತ್ರಿ 2 ಗಂಟೆಯ ವೇಳೆಗೆ ಬಾಗಿಲು ಬಡಿದ ಪೊಲೀಸರು ಒತ್ತಾಯದಿಂದ ಬಾಗಿಲು ತೆಗೆಸಿ ಮನೆಯನ್ನಿಡೀ ಜಾಲಾಡಿದ್ದಾರೆ. ಈ ಸಂದರ್ಭ ಒಬ್ಬ ಮಹಿಳಾ ಪೊಲೀಸ್ ಕೂಡ ಇರಲಿಲ್ಲ ಎಂದು ಸತ್ಯಜಿತ್ ಸುರತ್ಕಲ್‌ರ ಪತ್ನಿ ಸವಿತಾ ಸತ್ಯಜಿತ್ ಹೇಳಿದರು.
ಈ ಸಂದರ್ಭ ಹಿಂಜಾವೇ ಮುಖಂಡರಾದ ರಾಧಾಕೃಷ್ಣ ಅಡ್ಯಂತಾಯ, ಅಮಿತ್, ಸುಭಾಷ್ ಪಡೀಲ್ ಉಪಸ್ಥಿತರಿದ್ದರು.