ಶಿಕ್ಷಕರ ನಿಯೋಜನೆ ರದ್ದುಗೊಳಿಸುವಂತೆ ಆಗ್ರಹ: ಕುದ್ಮಾರಿನಲ್ಲಿ ಪೋಷಕರ ಪ್ರತಿಭಟನೆ
ಪುತ್ತೂರು, ಜು.10: ತಾಲೂಕಿನ ಕುದ್ಮಾರು ಶಾಲೆಯಿಂದ ಶಿಕ್ಷಕಿಯೋರ್ವರನ್ನು ಬೇರೆ ಶಾಲೆಗೆ ನಿಯೋಜನೆಗೊಳಿಸಿರುವುದನ್ನು ವಿರೋಧಿಸಿ ಎಸ್‌ಡಿಎಂಸಿ ನೇತೃತ್ವದಲ್ಲಿ ಪೋಷಕರ ಪ್ರತಿಭಟನೆ ಸೋಮವಾರ ಶಾಲಾ ವಠಾರದಲ್ಲಿ ನಡೆಯಿತು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಾಧಿಕಾರಿ ಆಗಮಿಸಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಬೆಳ್ಳಾರೆ ಠಾಣಾ ಎಸ್‌ಐ ಎಂ.ವಿ. ಚೆಲುವಯ್ಯನವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸುಂದರ ಗೌಡರು ಶಿಕ್ಷಕರನ್ನು ನೀಡುವ ಕುರಿತು ಭರವಸೆಯಿತ್ತರು.
ಭರವಸೆಗೆ ಮಣಿಯದ ಷೋಷಕರು ಶಿಕ್ಷಕರ ನೇಮಕವಾದ ಬಳಿಕವಷ್ಟೇ ನಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಗುವುದು. ಅಲ್ಲಿ ತನಕ ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿಕೊಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ತಾಲೂಕು ದೈಹಿಕ ಶಿಕ್ಷಣ ಅಧಿಕಾರಿ ಸುಂದರ ಗೌಡ ಅವರು ಶಿಕ್ಷಕರ ನಿಯೋಜನೆಯನ್ನು ರದ್ದುಪಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳಲಾಯಿತು.
ಪ್ರತಿಭಟನೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪಲತಾ ಪಿ. ಗೌಡ, ಪದಾಧಿಕಾರಿಗಳು, ಷೋಷಕರು, ಗ್ರಾಮಸ್ಥರು ಪಾಲ್ಗೊಂಡಿದ್ದರು. ಸ್ಕಂದಶ್ರೀ ಯುವಕ ಮಂಡಲ, ಸ್ನೇಹಿತರ ಬಳಗ ಹಾಗೂ ರೆಡ್ ಬಾಯ್ಸೊ ಸೇರಿದಂತೆ ಕುದ್ಮಾರಿನ ಅನೇಕ ಸಂಘ-ಸಂಸ್ಥೆಗಳು ಪ್ರತಿಭಟನೆಗೆ ಸಾಥ್ ನೀಡಿದರು.
ಜಿಪಂ ಸದಸ್ಯೆ ಪ್ರಮೀಳಾ ಜನಾರ್ಧನ, ಬೆಳಂದೂರು ಗ್ರಾಪಂ ಅಧ್ಯಕ್ಷೆ ಉಮೇಶ್ವರಿ ಅಗಳಿ, ಎಪಿಎಂಸಿ ನಿರ್ದೇಶಕ ದಿನೇಶ್ ಮೆದು, ಬೆಳಂದೂರು ಪಂಚಾಯತ್ ಉಪಾಧ್ಯಕ್ಷ ಹರೀಶ್ ಕೆರೆನಾರು, ಸದಸ್ಯರಾದ ಸಂಜೀವ ಗೌಡ ಕೂರ, ಮೇದಪ್ಪ ಕೆಡೆಂಜಿ, ರುಕ್ಮಿಣಿ ಕಡಮ್ಮಾಜೆ, ಕಾರ್ಯದರ್ಶಿ ಜಯಪ್ರಕಾಶ್ ಅಲೆಕ್ಕಾಡಿ, ಎಸ್‌ಡಿಎಂಸಿ ಉಪಾಧ್ಯಕ್ಷ ಮೇದಪ್ಪ ಕುವೆತ್ತೋಡಿ, ಯುವಕ ಮಂಡಲದ ಅಧ್ಯಕ್ಷ ದೇವರಾಜ್ ನೂಜಿ ಮತ್ತಿತರರು ಉಪಸ್ಥಿತರಿದ್ದರು.