ಅಹಿತಕರ ಘಟನೆ ನಡೆದರೆ ಸರಕಾರ ಹೊಣೆ: ವಿಎಚ್‌ಪಿ ಹೇಳಿಕೆ
ಮಂಗಳೂರು, ಜು.10: ಆರೆಸ್ಸೆಸ್ ಕಾರ್ಯಕರ್ತ ಶರತ್ ಶವಯಾತ್ರೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪೊಲೀಸರು ಹಿಂದುತ್ವವಾದಿ ನಾಯಕರನ್ನು ಬಂಧಿಸಿದರೆ ಪ್ರತಿಭಟನೆ ನಡೆಸಲಾಗುವುದು. ಇದರಿಂದ ಅಹಿತಕರ ಘಟನೆಗಳು ಮರುಕಳಿಸಿದರೆ ಸರಕಾರವೇ ನೇರ ಹೊಣೆ ಎಂದು ವಿಶ್ವ ಹಿಂದು ಪರಿಷತ್ ದ.ಕ. ಜಿಲ್ಲಾಧ್ಯಕ್ಷ ಜಗದೀಶ್ ಶೇಣವ ಹೇಳಿದರು.
ಸೋಮವಾರ ವಿಎಚ್‌ಪಿ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳರ ಶವಯಾತ್ರೆಯ ವೇಳೆ ಕಲ್ಲು ತೂರಾಟ ಮಾಡಿದವರು ಯಾರು ಎಂಬುದು ಪೊಲೀಸರು ಪರಿಶೀಲಿಸಿ ಕ್ರಮ ಕೈಗೊಳ್ಳಲಿ. ಅದು ಬಿಟ್ಟು ಸುಳ್ಳು ಕೇಸು ದಾಖಲಿಸಿದರೆ ಸುಮ್ಮನೆ ಕುಳಿತುಕೊಳ್ಳಲಾಗದು ಎಂದು ಎಚ್ಚರಿಸಿದರು.
ಸಂಘ ಪರಿವಾರದ ಮುಖಂಡರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‌ವೆಲ್, ಹರೀಶ್ ಪೂಂಜ, ಮುರಳಿಕೃಷ್ಣ, ಪ್ರದೀಪ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಘಟನೆ ಸ್ಥಳದಲ್ಲಿ ಅವರು ಯಾರೂ ಇರಲಿಲ್ಲ. ಹೀಗಿದ್ದರೂ ಪ್ರಕರಣ ದಾಖಲಿಸಿರುವುದು ಖಂಡನೀಯ ಎಂದರು.
ನಿಷೇಧಾಜ್ಞೆ ಉಲ್ಲಂಸಿ ಪ್ರತಿಭಟನೆ ನಡೆಸಿದ್ದನ್ನು ಸಮರ್ಥಿಸಿದ ಅವರು, ಕಾನೂನು ಉಲ್ಲಂಘನೆಯೂ ಪ್ರತಿಭಟನೆಯ ಒಂದು ರೂಪ. ಪೊಲೀಸರು ಕೇಸು ದಾಖಲಿಸಿದರೆ, ಅದನ್ನು ಎದುರಿಸಲು ಸಿದ್ಧ. ಅಲ್ಲಿ ಇಲ್ಲದ ನಾಯಕರ ಮೇಲೆ ಕೇಸು ದಾಖಲಿಸುವುದು ಯಾತಕ್ಕೆ ಎಂದು ಪ್ರಶ್ನಿಸಿದರು.
ಶರತ್ ಕುಟುಂಬಕ್ಕೆ ನೆರವು: ಬಿ.ಸಿ. ರೋಡ್‌ನಲ್ಲಿ ಹತ್ಯೆಯಾದ ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರ ಕುಟುಂಬಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಬಜರಂಗದಳ ಮಂಗಳೂರು ವಿಭಾಗದಿಂದ 50 ಸಾವಿರ ರೂ. ನೆರವು ನೀಡಲಾಗುವುದು ಎಂದು ವಿಹಿಂಪ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ವಿಹಿಂಪ-ಬಜರಂಗದಳ ಮುಖಂಡರಾದ ಭುಜಂಗ ಕುಲಾಲ್, ವಾಸುದೇವ ಗೌಡ, ಮನೋಹರ ಸುವರ್ಣ, ಪ್ರವೀಣ್ ಕುತ್ತಾರ್, ಶಿವಾನಂದ ಮೆಂಡನ್, ಗೋಪಾಲ್ ಕುತ್ತಾರ್, ಪುನೀತ್ ಅತ್ತಾವರ್ ಉಪಸ್ಥಿತರಿದ್ದರು.