ಅಪರೂಪದ ಕಾಯಿಲೆಗೆ ತುತ್ತಾಗಿರುವ ವಿದ್ಯಾರ್ಥಿ: ಚಿಕಿತ್ಸೆಗೆ ಆರ್ಥಿಕ ನೆರವು ನೀಡಲು ಮನವಿ
ಉಡುಪಿ ಜು.5: ಶರೀರದಲ್ಲಿ ಕೆಂಪು ರಕ್ತಕಣಗಳ ಉತ್ಪತ್ತಿ ನಿಯಮಿತವಾಗಿಲ್ಲದ ‘ಥಲಸ್ಸೇಮಿಯಾ’ ಎಂಬ ಅತಿ ವಿರಳ ಖಾಯಿಲೆಗೆ ಒಳಗಾಗಿರುವ ಉಡುಪಿಯ ಟ್ರಿನಿಟಿ ಶಾಲೆಯ 5ನೆ ತರಗತಿಯ ವಿದ್ಯಾರ್ಥಿ ಮಿಹಿರ್‌ನ ಚಿಕಿತ್ಸೆ ಗಾಗಿ ಆರ್ಥಿಕ ನೆರವು ನೀಡುವಂತೆ ಮಣಿಪಾಲದಲ್ಲಿ ವಾಸವಾಗಿರುವ ತಾಯಿ ಸುಜಾತ ಬ್ಯಾನರ್ಜಿ ದಾನಿಗಳಲ್ಲಿ ಮನವಿ ಮಾಡಿದ್ದಾರೆ.
ಪುಟ್ಟ ಮಗುವಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಮಿಹಿರ್ ಬಳಿಕ ಇದೇ ಖಾಯಿಲೆಗೆ ತುತ್ತಾಗಿದ್ದ ತನ್ನ ಅಣ್ಣನನ್ನೂ ಕಳೆದುಕೊಂಡಿದ್ದಾನೆ. ಇದೀಗ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿರುವ ತಾಯಿ ಸುಜಾತ ಅವರ ಆದಾಯವೊಂದೇ ಈ ಕುಟುಂಬಕ್ಕೆ ಆಸರೆಯಾಗಿದೆ.
ಬಾಲಕನಿಗೆ ಅಸ್ಥಿಮಜ್ಜೆಯ ಬದಲಾವಣೆ ಚಿಕಿತ್ಸೆಯನ್ನು ವೈದ್ಯರು ಸೂಚಿಸಿದ್ದು, ಅದಕ್ಕೆ ಸುಮಾರು 30 ಲಕ್ಷ ರೂ.ಗಳ ಅವಶ್ಯಕತೆ ಇದೆ. ಇದಕ್ಕಾಗಿ ತಾಯಿ ಸುಜಾತ ತನ್ನ ಮಗನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಪತಿ, ಮಗನನ್ನು ಕಳೆದುಕೊಂಡ ಸುಜಾತ, ಇದೀಗ ಇನ್ನೋರ್ವ ಮಗ ಕೂಡ ಅದೇ ಕಾಯಿಲೆಗೆ ತುತ್ತಾಗಿರುವುದರಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹಾಗಾಗಿ ಅವರು ದಾನಿಗಳ ನೆರವನ್ನು ಕೋರಿದ್ದಾರೆ.
ಬಾಲಕನ ಚಿಕಿತ್ಸೆಗಾಗಿ ಹಣ ಹೊಂದಿಸಲು ತೀರಾ ಕಷ್ಟ ಪಡುತ್ತಿರುವ ತಾಯಿ ಸುಜಾತ ಬ್ಯಾನರ್ಜಿ ಅವರಿಗೆ ಸಹಾಯ ಮಾಡುವ ದಾನಿಗಳು ಅವರನ್ನು ನೇರವಾಗಿ ಮೊಬೈಲ್- 08758511759ರಲ್ಲಿ ಸಂಪರ್ಕಿಸಬಹುದು.
ವಿಳಾಸ- 16-164 ಡಿ, ಶ್ರೀಕೃಪಾ, 11ನೆ ಕ್ರಾಸ್, ಎಎಲ್‌ಎನ್ ಲೇಔಟ್ ಮಣಿಪಾಲ- 5766104.
ಬ್ಯಾಂಕ್ ವಿವರ: ಸುಜಾತ ಬ್ಯಾನರ್ಜಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರೆಸಿಡೆನ್ಸಿ ರೋಡ್ ಶಾಖೆ, ಬೆಂಗಳೂರು, ಅಕೌಂಟ್ ನಂಬರ್- 20014052193, ಐಎಫ್‌ಎಸ್‌ಸಿ ಕೋಡ್- ಎಸ್‌ಬಿಐಎನ್0008598 ಇದಕ್ಕೂ ಹಣ ಕಳುಹಿಸಬಹುದು.
ಜೇಸಿಐ ನೆರವು: ಈ ವಿಷಯ ತಿಳಿದ ಜೇಸಿಐ ಉಡುಪಿ-ಇಂದ್ರಾಳಿ ಸ್ಥಾಪಕ ಮನೋಜ್ ಕಡಬ ಯುವ ಜೇಸಿ ವಿಭಾಗದ ಅಧ್ಯಕ್ಷೆ ಅನುಶ್ರೀ ಮತ್ತು ತಂಡ ಮಣಿಪಾಲದ ಆಸುಪಾಸಿನಲ್ಲಿ ಒಂದು ದಿನ ಮತ್ತು ಪುತ್ತೂರಿನಲ್ಲಿ ನಡೆದ ಸಿಂಚನ ಯುವಜೇಸಿ ಸಮ್ಮೇಳನದಲ್ಲಿ ದೇಣಿಗೆ ಸಂಗ್ರಹಿಸಿದೆ.
ಇದರಿಂದ ಸಂಗ್ರಹವಾದ ಒಟ್ಟು 23,776 ರೂ. ದೇಣಿಗೆಯನ್ನು ಘಟಕಾಧ್ಯಕ್ಷೆ ಜೇಸಿ ಶೆರ್ಲಿ ಮನೋಜ್ ಮತ್ತು ಉಪಾಧ್ಯಕ್ಷೆ ಜೇಸಿ ಶೆಬಾ ಮನೋಜ್ ಉಪಸ್ಥಿತಿಯಲ್ಲಿ ಬಾಲಕನ ತಾಯಿಗೆ ಇತ್ತೀಚೆಗೆ ಹಸ್ತಾಂತರಿಸಲಾಯಿತು.