ಕುತ್ಪಾಡಿ: ವನಮಹೋತ್ಸವ- ಇಕೋ ಕ್ಲಬ್ ಉದ್ಘಾಟನೆ
ಉಡುಪಿ, ಜು.10: ಉಡುಪಿ ಕುತ್ಪಾಡಿಯ ಎಸ್‌ಡಿಎಂ ಆಯುರ್ವೇದ ಕಾಲೇಜು ಹಾಗೂ ಆಸ್ಪತ್ರೆಯ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ದ್ರವ್ಯಗುಣ ವಿಭಾಗದ ಸಹಕಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ವನ್ನು ಆಸ್ಪತ್ರೆಯ ಆವಣದಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಗಳಾಗಿ ಉಡುಪಿಯ ಬೀಯಿಂಗ್ ಸೋಶಿಯಲ್‌ನ ಮುಖ್ಯ ರುವಾರಿ ಅವಿನಾಶ ಕಾಮತ್ ವಿದ್ಯಾರ್ಥಿಗಳಿಗೆ ಅಮೃತ ಬಳ್ಳಿಗಳನ್ನು ವಿತರಿಸಿ ಎಸ್‌ಡಿಎಂ ಪ್ರಕೃತಿ ಮಿತ್ರ ಎಂಬ ಹೆಸರಿನ ವಿದ್ಯಾರ್ಥಿಗಳ ಇಕೊ ಕ್ಲಬ್‌ನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಶ್ರೀಕಾಂತ ಯು. ಅಧ್ಯಕ್ಷತೆ ವಹಿಸಿದ್ದರು.
ಇದೇ ಸಂದರ್ಭದಲ್ಲಿ ಕಾಲೇಜಿನ ಪರಿಸರದಲ್ಲಿ ಔಷಧೀಯ ಬಳ್ಳಿಗಳ ಸಂರಕ್ಷಣೆ ಗಾಗಿ ಹಮ್ಮಿಕೊಂಡ ‘ವಲ್ಲಿ ವಿಕಾಸ’ಯೋಜನೆಯ ಅನುಷ್ಟಾನಕ್ಕಾಗಿ ಐದು ಔಷಧೀಯ ಬಳ್ಳಿಗಳನ್ನು ನೆಡಲಾಯಿತು.
ಸ್ನಾತಕೋತ್ತರ ವಿಭಾಗದ ಡೀನ್ ಡಾ.ಬಿ.ಆರ್.ದೊಡ್ಡಮನಿ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಸುಬ್ರಮಣ್ಯ ಭಟ್, ಶಲ್ಯತಂತ್ರ ವಿಭಾಗದ ಮುಖ್ಯಸ್ಥ ಡಾ.ಕೆ.ಆರ್.ರಾಮಚಂದ್ರ, ಡಾ.ನಾಗರಾಜ್, ಡಾ.ಚೈತ್ರಾ ಎಸ್.ಹೆಬ್ಬಾರ್ ಉಪಸ್ಥಿತರಿದ್ದರು.
ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ.ಶ್ರೀಕಾಂತ್ ಪಿ. ಸ್ವಾಗತಿಸಿದರು. ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಮುಹಮ್ಮದ್ ಫೈಸಲ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಡಾ.ಸುಮಾ ವಿ.ಮಲ್ಯಾ ವಂದಿಸಿದರು. ಮೇಘಾ ಬಿ. ಹಾಗೂ ಮಂಜುಶ್ರಿ ಎಸ್. ಕಾರ್ಯಕ್ರಮ ನಿರೂಪಿಸಿದರು.