×
Ad

ಮೆದುಳಿನಲ್ಲಿ ರಕ್ತಸ್ರಾವ: ಉಳ್ಳಾಲ ನಗರಸಭಾ ಸದಸ್ಯ ಮೃತ್ಯು

Update: 2017-07-10 21:05 IST

ಉಳ್ಳಾಲ, ಜು. 10: ಅಧಿಕ ರಕ್ತದೊತ್ತಡದಿಂದ ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದ ಉಳ್ಳಾಲ ನಗರಸಭಾ ಸದಸ್ಯ ಹನೀಫ್ ಕೋಟೆಪುರ (48) ಅವರು ಮೆದುಳು ರಕ್ತಸ್ರಾವಕ್ಕೊಳಗಾಗಿ ಸಂಜೆ ಮೃತಪಟ್ಟರು.

ಹನೀಫ್ 2010ರ ಉಳ್ಳಾಲ ಪುರಸಭಾ ಚುನಾವಣೆಯಲ್ಲಿ ಕೋಟೆಪುರ 1ನೇ ವಾರ್ಡಿನಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಫರ್ಧಿಸಿ ಬಹುಮತದಿಂದ ಜಯ ಗಳಿಸಿದ್ದರು. ನಂತರದ ದಿನಗಳಲ್ಲಿ ಪುರಸಭೆಯು ನಗರಸಭೆಯಾಗಿ ಮೇಲ್ದರ್ಜೆಗೇರಿತ್ತು. ಬಿಜೆಪಿ ಪಕ್ಷದ ಅಲ್ಪಸಂಖ್ಯಾತ ಮೋರ್ಚಾದಲ್ಲೂ ಹನೀಫ್  ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಈ ಹಿಂದೆ ಅತಿಯಾದ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದರೆನ್ನಲಾಗಿದೆ.

ಸೋಮವಾರ ಬೆಳಗ್ಗೆ ಮತ್ತೆ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಸ್ನೇಹಿತರಾದ ನಗರಸಭಾ ಸದಸ್ಯ ಇಸ್ಮಾಯಿಲ್ ಪೊಡಿಮೋನು ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸಂಜೆ ಹನೀಫ್ ಮೆದುಳು ರಕ್ತಸ್ರಾವವಾಗಿ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು.

ಆಸ್ಪತ್ರೆಗೆ ಸಚಿವ ಯು.ಟಿ ಖಾದರ್, ನಗರಸಭಾ ಅಧ್ಯಕ್ಷ ಹುಸೈನ್ ಕುಂಞಿ ಮೋನು ಅವರು ತೆರಳಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತದೇಹದ ದಫನವು ಮಂಗಳವಾರ ಬೆಳಗ್ಗೆ ಕೋಟೆಪುರದಲ್ಲಿ ನಡೆಯಲಿದೆ.

ಸಂಸದ ನಳಿನ್ ಕುಮಾರ್ ಕಟೀಲು, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಉಪಾಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ವಿಪಕ್ಷ ನಾಯಕಿ ಮಹಾಲಕ್ಷ್ಮಿ, ಮಾಜಿ ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಡಾ.ಮುನೀರ್ ಬಾವಾ, ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ಬೋಳಿಯಾರ್ ಸೇರಿದಂತೆ ಅನೇಕ ಪಕ್ಷದ ಕಾರ್ಯಕರ್ತರು ಹನೀಫ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News