ಪಕ್ಷದಲ್ಲಿ ಸ್ಥಾನ ಉಳಿಸಿಕೊಳ್ಳಲು ಡಿ.ವಿ., ಶೋಭಾ ಕರಂದ್ಲಾಜೆ ಬೇಜಾವ್ದಾರಿಯುತ ಹೇಳಿಕೆ: ಸಚಿವ ಯು.ಟಿ.ಖಾದರ್
ಮಂಗಳೂರು, ಜು.10: ಬಿಜೆಪಿ ಪಕ್ಷದಲ್ಲಿ ಸ್ಥಾನ ಉಳಿಸಿಕೊಳ್ಳಲು ಡಿ.ವಿ.ಸದಾನಂದ ಗೌಡ ಮತ್ತು ಶೋಭಾ ಕರಂದ್ಲಾಜೆ ಬೇಜಾವ್ದಾರಿಯುತ ಹೇಳಿಕೆ ನೀಡಿದ್ದಾರೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಕಲ್ಲಡ್ಕದಲ್ಲಿ ಮತ್ತು ಜಿಲ್ಲೆಯಲ್ಲಿ ಉಂಟಾಗಿರುವ ಕೋಮುದ್ವೇಷದ ಕೊಲೆಗೆ ಸಚಿವ ರಮಾನಾಥ ರೈ ಮತ್ತು ಯು.ಟಿ.ಖಾದರ್ ಕಾರಣ ಎಂಬ ಹೇಳಿಕೆಗೆ ಸಚಿವ ಖಾದರ್ ಇಂದು ತಿರುಗೇಟು ನೀಡಿದ್ದಾರೆ.
ಜಿಲ್ಲೆಯಲ್ಲಿ 144 ಸೆಕ್ಷನ್ ಇದ್ದಗಲೂ ಅದನ್ನು ಮೀರಿ ಶಾಂತಿಭಂಗಕ್ಕೆ ಕಾರಣರಾದವರಿಂದ ಜಿಲ್ಲೆಯಲ್ಲಿ ಅಹಿತಕರ ವಾತಾವರಣ ನಿರ್ಮಾಣವಾಗಿದೆ. ಈ ನಡುವೆಯೂ ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಶರತ್‌ನನ್ನು ಆಸ್ಪತ್ರೆಗೆ ತಲುಪಿಸಿ ಬದುಕಿಸಲು ಯತ್ನಿಸಿದ ರಿಕ್ಷಾ ಚಾಲಕ, ಹಲ್ಲೆಗೊಳಗಾದ ರಿಯಾಝ್‌ರನ್ನು ರಕ್ಷಿಸಿದ ಪ್ರಕಾಶ್ ಎಂಬ ವ್ಯಕ್ತಿಗಳು ಈ ಜಿಲ್ಲೆಯ ನೈಜ ಸಂಸ್ಕೃತಿಯ ಪ್ರತಿನಿಧಿಗಳಾಗಿದ್ದಾರೆ ಅವರನ್ನು ಅಭಿನಂದಿಸಬೇಕಾಗಿದೆ. ಕೋಮುದ್ವೇಷದಿಂದ ಬಲಿಯಾದ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಪ್ರಕರಣ ಇರಲಿಲ್ಲ ಅವರಿಗೆ ಮುಖ್ಯ ಮಂತ್ರಿಯ ಪರಿಹಾರ ನಿಧಿಯಿಂದ ಸಹಾಯಧನ ನೀಡಲು ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು. ಜಿಲ್ಲೆಯಲ್ಲಿ ಉಂಟಾದ ಅಹಿತಕರ ವಾತಾವರಣದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಸರಕಾರದ ವತಿಯಿಂದ ವೆಚ್ಚ ಭರಿಸಲು ಕ್ರಮ ಕೈ ಗೊಳ್ಳಲಾಗುವುದು ಎಂದು ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.