ಭಾರತವು ‘ಟಿಬೆಟ್ ಕಾರ್ಡ್’ ಬಳಸಿದಲ್ಲಿ ಗಂಭೀರ ಪರಿಣಾಮ: ಚೀನಿ ಮಾಧ್ಯಮ ಎಚ್ಚರಿಕೆ
ಬೀಜಿಂಗ್,ಜು.10: ಸಿಕ್ಕಿಂ ಗಡಿಯಲ್ಲಿ ಸೇನಾ ಉದ್ವಿಗ್ನತೆ ಭುಗಿಲೆದ್ದಿರುವ ನಡುವೆಯೇ ಬೀಜಿಂಗ್ ಮೇಲೆ ಒತ್ತಡ ಹೇರಲು ಹೊಸದಿಲ್ಲಿಯು ಒಂದು ವೇಳೆ ಟಿಬೆಟ್ ಕಾರ್ಡ್ ಬಳಸಿದ್ದೇ ಆದಲ್ಲಿ ಅದು ತಾನಾಗಿಯೇ ತನ್ನನ್ನು ಸುಟ್ಟುಕೊಂಡಂತೆ ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಸಂಸ್ಥೆಯೊಂದು ಎಚ್ಚರಿಕೆ ನೀಡಿದೆ.
ಲಡಾಖ್‌ನ ಸರೋವರವೊಂದರ ತೀರದಲ್ಲಿ ಟಿಬೆಟ್‌ನ ರಾಷ್ಟ್ರಧ್ವಜವನ್ನು ಹಾರಿಸಲಾಗಿದೆಯೆಂದು ಭಾರತದ ಕೆಲವು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳನ್ನು ಉಲ್ಲೇಖಿಸಿ ಅದು ಈ ಪ್ರಚೋದನಕಾರಿ ಲೇಖನವನ್ನು ಪ್ರಕಟಿಸಿದೆ.
ಟಿಬೆಟ್‌ನ ದೇಶಭ್ರಷ್ಟ ಸರಕಾರವು ಅಂಗೀಕರಿಸಿರುವ ಸ್ವಾತಂತ್ಯದ ಸಂಕೇತವಾದ ಟಿಬೆಟಿಯನ್ ರಾಷ್ಟ್ರಧ್ವಜವನ್ನು ಚೀನಾ-ಭಾರತ ಗಡಿಯ ಸಮೀಪದಲ್ಲಿರುವ, ಪಾಂಗೊಂಗ್ ಸರೋವರದ ಬಳಿ ಹಾರಿಸಲಾಗಿದೆಯೆಂದು ಭಾರತೀಯ ಮಾಧ್ಯಮಗಳು ವರದಿ ಮಾಡಿರುವುದಾಗಿ ಚೀನಾದ ಸರಕಾರಿ ಮುಖವಾಣಿ ಪತ್ರಿಕೆ ‘ಗ್ಲೋಬಲ್ ಟೈಮ್ಸ್’ ತಿಳಿಸಿದೆ.
ಲಡಾಖ್‌ನಲ್ಲಿರುವ ಪಾಂಗೊಂಗ್ ಸರೋವದ ಮೂಲಕ ಗಡಿ ನಿಯಂತ್ರಣ ರೇಖೆ ಹಾದುಹೋಗುವುದರಿಂದ ಅದು ವ್ಯೆಹಾತ್ಮಕ ದೃಷ್ಟಿಯಿಂದ ಮಹತ್ವದ್ದಾಗಿದೆ. ಉತ್ತರಭಾರತದಲ್ಲಿರುವ ದೇಶಭ್ರಷ್ಟ ಟಿಬೆಟಿಯನ್ ಸರಕಾರವು ಈ ಪ್ರದೇಶದಲ್ಲಿ ತನ್ನ ಧ್ವಜವನ್ನು ಹಾರಿಸಿರುವುದು ಇದೇ ಮೊದಲ ಸಲ ಎಂದು ಗ್ಲೋಬಲ್ ಟೈಮ್ಸ್ ವರದಿಯಲ್ಲಿ ತಿಳಿಸಿದೆ. ಒಂದು ವೇಳೆ ಹೊಸದಿಲ್ಲಿಯ, ಟಿಬೆಟಿಯನ್ ದೇಶಭ್ರಷ್ಟರ ಧ್ವಜಾರೋಹಣದ ಕೃತ್ಯಗಳಿಗೆ ಕುಮ್ಮಕ್ಕು ನೀಡುತ್ತಿದ್ದಲ್ಲಿ ಅದು ತನ್ನನ್ನು ತಾನೇ ಸುಟ್ಟುಕೊಂಡಂತೆ ಎಂದು ಪತ್ರಿಕೆ ಕಿಡಿಕಾರಿದೆ. ಗಡಿವಿವಾದಗಳು ಹಾಗೂ ಟಿಬೆಟ್ ಪ್ರಶ್ನೆಯು ಚೀನಾದ ಪ್ರಧಾನ ಹಿತಾಸಕ್ತಿಗಳಾಗಿದ್ದು, ಇಂತಹ ಯಾವುದೇ ಪ್ರಚೋದನೆಗಳಿಗೆ ಅದು ಬಾಗಲಾರದು ಎಂದು ಗ್ಲೋಬಲ್ ಟೈಮ್ಸ್ ಹೇಳಿದೆ.
ಈಗ ನಡೆಯುತ್ತಿರುವ ಗಡಿವಿವಾದವನ್ನು ಗಮನಕ್ಕೆ ತೆಗೆದುಕೊಂಡು ಭಾರತ ಸರಕಾರವು ಉದ್ವಿಗ್ನತೆ ಉಲ್ಬಣಿಸದಂತೆ ವಿವೇಚನೆಯಿಂದ ಕಾರ್ಯಾ ಚರಿಸಬೇಕಾಗಿದೆ. ಟಿಬೆಟಿಯನ್ ದೇಶಭ್ರಷ್ಟರನ್ನು ಹಾಗೂ ಭಾರತ ನೆಲದಲ್ಲಿ ಅವರು ನಡೆಸುತ್ತಿರುವ ಚೀನಾವಿರೋಧಿ ಚಟುವಟಿಕೆಗಳನ್ನು ನಿಯಂ ತ್ರಿಸುವುದು ಅದರ ಜವಾಬ್ದಾರಿಯಾಗಿದೆ’’ ಎಂದು ಪತ್ರಿಕೆ ಹೇಳಿದೆ.