ಸಹಜ ಸ್ಥಿತಿಗೆ ಮರಳಿದ ಬಂಟ್ವಾಳ

Update: 2017-07-10 16:17 GMT

ಬಂಟ್ವಾಳ, ಜು. 10: ಶರತ್ ಮಡಿವಾಳರ ಮೃತದೇಹದ ಮೆರವಣಿಗೆಯ ವೇಳೆ ಕೈಕಂಬ ಮತ್ತು ಬಿ.ಸಿ.ರೋಡಿನಲ್ಲಿ ನಡೆದ ಕಲ್ಲು ತೂರಾಟ, ದಾಂಧಲೆ ಯಿಂದ ಪ್ರಕ್ಷುಬ್ದಗೊಂಡ ಬಂಟ್ವಾಳ ಸೋಮವಾರ ಸಹಜ ಸ್ಥಿತಿಗೆ ಮರಳಿದೆ.

ಶನಿವಾರ, ರವಿವಾರ ಬಂದ್ ಆಗಿದ್ದ ಬಿ.ಸಿ.ರೋಡ್, ಕೈಕಂಬದ ಎಲ್ಲ ಅಂಗಡಿ ಮುಂಗಟ್ಟುಗಳು ಸೋಮವಾರ ತೆರೆದಿದ್ದವು. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆಯಾದರೂ ಎಂದಿನಂತೆ ಸಾರ್ವಜನಿಕರ ಸಂಚಾರ ಇಲ್ಲವಾಗಿದೆ. ಸಂಜೆಯಾಗುತ್ತಲೇ ಜನರು ಮನೆ ಸೇರುತ್ತಿರುವುದರಿಂದ ಕಲ್ಲಡ್ಕ, ಮೆಲ್ಕಾರ್, ಬಿ.ಸಿ.ರೋಡ್, ಕೈಕಂಬದಲ್ಲಿ ಸ್ಮಶಾನ ಮೌನ ಆವರಿಸಿದೆ. ಎಲ್ಲಡೆಯೂ ಖಾಕಿ ಕಾವಲು ಇದೆ.

ಮರುಜೀವ ಪಡೆದ ಸಿಸಿ ಕ್ಯಾಮರಾಗಳು:

ತಾಲೂಕಿನಲ್ಲಿ ಅಹಿತಕರ ಘಟನೆಗಳು ಮರುಕಳಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪ್ರಮುಖ ಪ್ರದೇಶಗಳಲ್ಲಿ ಹಾಗೂ ಆಯಕಟ್ಟಿನಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಪ್ರಕ್ರಿಯಲ್ಲಿ ಪೊಲೀಸ್ ಇಲಾಖೆ ತೊಡಗಿದೆ.

ಫರಂಗಿಪೇಟೆ, ಮಾರಿಪಳ್ಳ, ಕೈಕಂಬ, ಬಿ.ಸಿ.ರೋಡ್ ಮೊದಲಾದೆಡೆ ಈ ಹಿಂದೆಯೇ ಸಿಸಿ ಕ್ಯಾಮರಾ ಅಳವಡಿಸಲಾಗಿತ್ತಾದರೂ ನಿರ್ವಹಣೆ ಇಲ್ಲದೆ ಅವುಗಳು ಕೆಟ್ಟು ಹೋಗಿದ್ದವು. ಇದೀಗ ಕೆಲವು ಕ್ಯಾಮರಾಗಳನ್ನು ದುರಸ್ಥಿಗೊಳಿಸಿ ಮರುಜೀವ ನೀಡಲಾಗಿದೆ.

ದುರಸ್ಥಿಯಾಗದ ಕ್ಯಾಮರಾಗಳನ್ನು ತೆರವುಗೊಳಿಸಿ ಹೊಸ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ತುಂಬೆ, ಕೈಕಂಬದಲ್ಲಿ ಹೆಚ್ಚುವರಿಯಾಗಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ.

ತಪಾಸಣೆ ಬಿಗಿ:

ಉಡುಪಿ, ಚಿಕ್ಕಮಗಳೂರು, ಹಾಸನ, ಹಾವೇರಿ, ಮೈಸೂರು, ಕೊಡಗು ಜಿಲ್ಲೆಗಳ 1,200 ಕ್ಕೂ ಹೆಚ್ಚು ಪೊಲೀಸರನ್ನು ಬಂಟ್ವಾಳದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ.

100ರಷ್ಟು ಎಸ್ಸೈ, ಸರ್ಕಲ್, ಡಿವೈಎಸ್ಪಿಗಳು ಭದ್ರತೆಯ ಉಸ್ತುವಾರಿಯನ್ನು ವಹಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆ, ಕಡೆಗೋಳಿ, ಕೈಕಂಬ, ಕಲ್ಲಡ್ಕ ಪ್ರಮುಖ ರಸ್ತೆಗಳಲ್ಲಿ ನಾಕಬಂಧಿ ಅಳವಡಿಸಲಾಗಿದ್ದು ಸಂಜೆಯಾಗುತ್ತಿದ್ದಂತೆ ತಪಾಸಣಾ ಕಾರ್ಯ ಚುರುಕುಗೊಳಿಸಲಾಗಿದೆ.

ಪ್ರತೀ ವಾಹನಗಳ ನೋಂದಾಣಿ ಸಂಖ್ಯೆ ಬರೆದಿಡಲಾಗುತ್ತಿದೆಯಲ್ಲದೆ, ವಾಹನದ ದಾಖಲೆ ಪತ್ರಗಳನ್ನೂ ತಪಾಸಣೆ ನಡೆಸಲಾಗುತ್ತಿದೆ. ದಾಖಲೆ ಪತ್ರ ಇಲ್ಲದ ವಾಹನಗಳನ್ನು ವಶಕ್ಕೆ ಪಡೆದುಕೊಳ್ಳಲಾಗುತ್ತಿದೆ.

ತಪಾಸಣೆ ವೇಳೆ ಕಲ್ಲು, ಮಾರಕಾಸ್ತ್ರಗಳು ಪತ್ತೆಯಾದಲ್ಲಿ ಕೂಡಲೇ ವಾಹನದಲ್ಲಿದ್ದವರನ್ನು ಬಂಧಿಸಿ ಕಾನೂನು ಕ್ರಮ ಜರಗಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲೂ ತಾತ್ಕಾಲಿಕ ಚೆಕ್‌ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ. ಕನ್ಯಾನ, ಸಾರಡ್ಕ, ನೆಲ್ಲಿಕಟ್ಟೆ ಮಾರ್ಗವಾಗಿ ಕೇರಳ ರಾಜ್ಯದಿಂದ ಬರುವ ವಾಹನಗಳ ಮೇಲೆ ನಿಗಾ ಇಡಲಾಗುತ್ತಿದೆ. ಹೆಚ್ಚುವರಿ ಪೊಲೀಸರೊಂದಿಗೆ ಮೂವರು ಎಸ್ಸೈಗಳ ನೇತೃತ್ವದಲ್ಲಿ ಕ್ಷಿಪ್ರ ಕಾರ್ಯ ಪಡೆಯನ್ನು ನಿಯೋಜಿಸಲಾಗಿದೆ. ವಿಟ್ಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಟ್ಟು 7 ಎಸ್ಸೈಗಳು, ಮೂವರು ಸರ್ಕಲ್ ಇನ್ ಸ್ಪೆಕ್ಟರ್‌ಗಳು ಭದ್ರತೆಯ ನೇತೃತ್ವ ವಹಿಸಿದ್ದಾರೆ ಎಂದು ಎಸ್ಸೈ ನಾಗರಾಜ್ ತಿಳಿಸಿದ್ದಾರೆ.

ಮೂವರು ವಶಕ್ಕೆ: ಬಿ.ಸಿ.ರೋಡಿನಲ್ಲಿ ವಾಹನ ತಪಾಸನೆ ನಡೆಸುತ್ತಿದ್ದ ವೇಳೆ ಆಟೋ ರಿಕ್ಷಾವೊಂದರಲ್ಲಿ ಬರುತ್ತಿದ್ದ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ರಿಕ್ಷಾದ ದಾಖಲೆ ಪತ್ರ ಹಾಗೂ ಲೈಸನ್ಸ್ ಇಲ್ಲದ ಆರೋಪ ಅವರ ಮೇಲಿದೆ. 

ಮಾಹಿತಿ ನೀಡಲು ಪೊಲೀಸರು ನಕಾರ: 

ನಿಷೇಧಾಜ್ಞೆಯ ನಡುವೆಯೂ ಬಿ.ಸಿ.ರೋಡಿನಲ್ಲಿ ನಡೆದ ಪ್ರತಿಭಟನೆ ಹಾಗೂ ಶರತ್ ಮಡಿವಾಳರ ಮೃತದೇಹದ ಮೆರವಣಿಗೆಯ ಸಂದರ್ಭದಲ್ಲಿ ಕೈಕಂಬ, ಬಿ.ಸಿ.ರೋಡಿನಲ್ಲಿ ನಡೆದ ಕಲ್ಲು ತೂರಾಟ, ದಾಂಧಲೆ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯಲ್ಲಿ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ.

ಒಟ್ಟು ಎಷ್ಟು, ಯಾರ ವಿರುದ್ಧ ಪ್ರಕರಣ ದಾಖಲಾಗಿದೆ ಎಂಬುದರ ಬಗ್ಗೆ ವಿವರ ನೀಡಲು ಪೊಲೀಸರು ನಿರಾಕರಿಸಿದ್ದಾರೆ. ಬಂಟ್ವಾಳ ನಗರ ಠಾಣೆಯ ಲ್ಯಾಂಡ್‌ಲೈನ್‌ಗೆ ಕರೆ ಮಾಡಿದಾಗ ಎಸ್ಸೈ ಬಳಿ ಕೇಳಿ ಎಂದರೆ, ಎಸ್ಸೈ -ಸರ್ಕಲ್, ಸರ್ಕಲ್ -ಡಿವೈಎಸ್ಪಿ, ಡಿವೈಎಸ್ಪಿ -ಎಸ್ಪಿಗೆ ಕೇಳಿ ಎನ್ನುತ್ತಾರೆ.

ಎಸ್ಪಿ ಪತ್ರಕರ್ತರ ಕರೆ ಸ್ವೀಕರಿಸದೆ ಪರೋಕ್ಷವಾಗಿ ಮಾಹಿತಿ ನೀಡಲು ನೀರಾಕರಿಸುತ್ತಿದ್ದಾರೆ. ಗೌಪ್ಯತೆಯ ಹಿನ್ನೆಲೆಯಲ್ಲಿ ಮಾಹಿತಿ ನೀಡಲು ಪೊಲೀಸರು ನಿರಾಕರಿಸುತ್ತಿದ್ದಾರೆ ಎನ್ನಲಾಗಿದ್ದರೂ ಮಾಹಿತಿಗಾಗಿ ಪರ್ತಕರ್ತರು ಪರದಾಡಬೇಕಾಗಿದೆ.

ಮುಖಂಡರ ವಿರುದ್ಧ ಪ್ರಕರಣ ದಾಖಲು:

ಶರತ್ ಮಡಿವಾಳರ ಮೃತದೇಹದ ಮೆರವಣಿಗೆಯ ಸಂದರ್ಭ ಕೈಕಂಬದಲ್ಲಿ ಕಲ್ಲು ತೂರಾಟ, ದಾಂಧಲೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಘಟನೆಗೆ ಸಂಬಂಧಿಸಿ ಮೆರವಣಿಗೆಯ ನೇತೃತ್ವ ವಹಿಸಿದ್ದ ಬಿಜೆಪಿ ಮತ್ತು ಸಂಘಪರಿವಾರದ ಐವರು ಮುಖಂಡರ ವಿರುದ್ಧ ಪೊಲೀಸ್ ಇಲಾಖೆ ಪ್ರಕರಣ ದಾಖಲಿಸಿದೆ.

ಬಿಜೆಪಿ ಮತ್ತು ಸಂಘಪರಿವಾರದ ಮುಖಂಡರಾದ ಸತ್ಯಜಿತ್ ಸುರತ್ಕಲ್, ಶರಣ್ ಪಂಪ್‌ವೆಲ್, ಮುರಳೀಕೃಷ್ಣ ಹಸಂತಡ್ಕ, ಹರೀಶ್ ಪೂಂಜ, ಪ್ರದೀಪ್ ಪಂಪ್‌ವೆಲ್ ವಿರುದ್ಧ ಬಂಟ್ವಾಳ ನಗರ ಠಾಣೆಯಲ್ಲಿ ಕೊಲೆಯತ್ನ ಕೇಸು ದಾಖಲಾಗಿದ್ದು, ಮೃತದೇಹದ ಮೆರವಣಿಗೆಯ ಸಂದರ್ಭದಲ್ಲಿ ಕಲ್ಲುತೂರಾಟಕ್ಕೆ ಪ್ರಚೋದಿಸಿದ್ದಾರೆಂಬ ಆರೋಪ ಇವರ ಮೇಲಿದೆ.

ಈ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News