ಅಶ್ರಫ್, ಶರತ್ ಕುಟುಂಬಕ್ಕೆ ಸರಕಾರದಿಂದ ಸೂಕ್ತ ಪರಿಹಾರ: ಯು.ಟಿ.ಖಾದರ್

Update: 2017-07-10 16:13 GMT

ಉಳ್ಳಾಲ, ಜು. 10: ಇತ್ತೀಚೆಗೆ ಬಂಟ್ವಾಳದಲ್ಲಿ ಹತ್ಯೆಗೀಡಾದ ಅಶ್ರಫ್ ಕಲಾಯಿ ಮತ್ತು ಶರತ್ ಮಡಿವಾಳ ಅವರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲಾಗುವುದು ಮತ್ತು ಹತ್ಯೆ ಯತ್ನದಲ್ಲಿ ಗಾಯಗೊಂಡವರಿಗೆ ಮುಖ್ಯಮಂತ್ರಿ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದು ಆಹಾರ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದರು.

ಅವರು ಅಡ್ಯಾರ್‌ನಲ್ಲಿ ಚೂರಿ ಇರಿತಕ್ಕೊಳಗಾಗಿ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರಿಯಾಝ್ ಮತ್ತು ಕೇರಳದ ವಿದ್ಯಾರ್ಥಿ ಸಾಜಿದ್, ಮತ್ತು ರಾಣಿಪುರದಲ್ಲಿ ತಲವಾರು ಹಲ್ಲೆಗೊಳಗಾಗಿ ದೇರಳಕಟ್ಟೆಯ ಕ್ಷೇಮ ಆಸ್ಪತ್ರೆಯಲ್ಲಿ ದಾಖಲಾಗಿರುವ ಚಿರಂಜೀವಿಯನ್ನು ಭೇಟಿ ಮಾಡಿದ ಬಳಿಕ ಮಾತನಾಡಿದರು.
 
ಹತ್ಯೆಗೀಡಾದ ಅಶ್ರಫ್ ಕಲಾಯಿ ಮತ್ತು ಶರತ್ ಮಡಿವಾಳ ಸಂಘಟನೆಯಲ್ಲಿ ಭಾಗಿಯಾಗಿದ್ದರೂ, ಅವರು ಯಾವುದೇ ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗವಹಿಸಿಲ್ಲ. ಇಬ್ಬರೂ ಅಮಾಯಕರಾಗಿದ್ದು, ಅವರಿಗೆ ಗರಿಷ್ಠ ಮಟ್ಟದಲ್ಲಿ ಪರಿಹಾರ ನೀಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇನೆ ಎಂದ ಅವರು, ಚೂರಿ ಇರಿತ ಮತ್ತು ತಲವಾರು ಹಲ್ಲೆಯಿಂದ ಗಾಯಗೊಂಡವರಿಗೆ ಆಸ್ಪತ್ರೆಯ ಖರ್ಚು ಭರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಪರಿಹಾರ ನೀಡಲಾಗುವುದು ಎಂದರು.

ಮಾನವೀಯತೆ ಮೆರದವರಿಗೆ ಗೌರವ: ಶರತ್‌ಗೆ ಚೂರಿ ಇರಿದಿದ್ದ ಸಂದರ್ಭದಲ್ಲಿ ರವೂಫ್ ಅವರು ಆಸ್ಪತ್ರೆಗೆ ದಾಖಲಿಸುವಲ್ಲಿ ತಮ್ಮ ಮಾನವೀಯತೆ ಮೆರೆದಿದ್ದು, ರಿಯಾಝ್ ಮತ್ತು ಸಾಜಿದ್ ಚೂರಿಯಿಂದ ಇರಿತಕ್ಕೊಳಗಾದಾಗ ಬಂಟ್ವಾಳದ ಪ್ರಕಾಶ್ ಅವರು ಮಾನವೀಯತೆ ಮೆರೆದಿದ್ದು, ಇಬ್ಬರನ್ನು ಸರಕಾರದ ವತಿಯಿಂದ ಸನ್ಮಾನಿಸಲಾಗುವುದು. ಈ ಇಬ್ಬರೂ ಕೋಮು ಸಾಮರಸ್ಯಕ್ಕೆ ಮಾದರಿಯಾಗಿದ್ದು, ಇದು ನಮ್ಮ ಜಿಲ್ಲೆಯ ನಿಜವಾದ ಸಂಸ್ಕೃತಿಯಾಗಿದೆ ಎಂದರು.
     

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News