ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ
ಉಡುಪಿ, ಜು.10: ಬ್ರಹ್ಮಾವರದಲ್ಲಿರುವ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇಂದು ಹಮ್ಮಿಕೊಳ್ಳಲಾದ ರಾಷ್ಟ್ರೀಯ ಮೀನು ಕೃಷಿಕರ ದಿನಾಚರಣೆ ಹಾಗೂ ಕೃಷಿ ಹೊಂಡಗಳಲ್ಲಿ ಮೀನು ಮರಿ ಸಾಕಾಣಿಕೆ ತರಬೇತಿ ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಿ. ಪಾರ್ಶ್ವನಾಥ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇಲಾಖೆಯು ಮೀನುಗಾರರ ಕಲ್ಯಾಣ ಅಭಿವೃದ್ಧಿ ಹಾಗೂ ಮೀನು ಕೃಷಿಕರಿಗೆ ಬೇಕಾದ ಹಲವು ಉಪಯುಕ್ತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇಲಾಖೆ ಮೀನುಮರಿಗಳನ್ನು ತಂದು ಅವುಗಳನ್ನು ಒಂದು ಹಂತದವರೆಗೆ ಸಾಕಿ ಬಳಿಕ ಕೃಷಿಕರಿಗೆ ವಿತರಿಸುತ್ತದೆ. ಗ್ರಾಪಂ ಹಾಗೂ ಸರಕಾರಿ ಕೆರೆಗಳಿಗೂ ಮೀನುಗಳನ್ನು ವಿತರಿಸಲಾಗುತ್ತಿದೆ ಎಂದರು.
ಸಿಹಿ ನೀರು ಮತ್ತು ಉಪ್ಪುನೀರು ಸೇರಿರುವ ಪ್ರದೇಶಕ್ಕೆ ಸೀಮಿತವಾಗಿರುವ ಮೀನು ಮರಿಗಳನ್ನು ವಿತರಿಸುತ್ತಿದ್ದೇವೆ. ಇದರಲ್ಲಿ ಮೀನು ಮರಿಗಳ ನಿರ್ವಹಣೆ, ಮರಿಗಳಿಗೆ ಬೇಕಾದ ಆಮ್ಲಜನಕ ಒದಗಿಸುವುದು ಮುಖ್ಯವಾಗಿರುತ್ತದೆ. ಮೀನು ಕೃಷಿಕರು ಕೇಂದ್ರ ಸರಕಾರದಿಂದ ಸಹ ಉತ್ತಮ ಗುಣಮಟ್ಟದ ಮೀನು ಮರಿಗಳನ್ನು ಕೊಂಡು ಸಾಕಬಹುದು ಎಂದು ಪಾರ್ಶ್ವನಾಥ್ ತಿಳಿಸಿದರು.ಮುಖ್ಯಅತಿಥಿಗಳಾಗಿ ಬ್ರಹ್ಮಾವರ ಕೃಷಿ ವಿವಿಯ ಪ್ರಬಾರ ಪ್ರಾಂಶುಪಾಲ ರಾದ ಡಾ.ವಿನೋದ್, ಮೀನುಗಾರಿಕಾ ಸಹಾಯಕ ನಿರ್ದೇಶಕ ಶಿವಕುಮಾರ ಜಿ.ಎಂ. ಮೀನುಗಾರಿಕಾ ಕೃಷಿ, ಒಳನಾಡು ಮೀನು ಕೃಷಿ, ಮೀನು ಮರಿ ಪಾಲನೆ ಹಾಗೂ ಗದ್ದೆ, ಕೆರೆಗಳಲ್ಲಿ ಮೀನು ಸಾಕಣೆ ಕುರಿತು ವಿವರಿಸಿದರು.
ಬ್ರಹ್ಮಾವರ ಕೆವಿಕೆಯ ವಿಷಯತಜ್ಞ ಶ್ರೀನಿವಾಸ್ ಹೆಚ್. ಹುಲಕೋಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬ್ರಹ್ಮಾವರ ವಲಯ ಕೃಷಿ-ತೋಟಗಾರಿಕೆ ಸಂಶೋಧನಾ ಕೇಂದ್ರದ ಹಿರಿಯ ಕ್ಷೇತ್ರ ಅಧೀಕ್ಷಕ ಡಾ.ಎಂ.ಶಂಕರ್ ಸ್ವಾಗತಿಸಿ ದರು. ಸಹಾಯಕ ಪ್ರಾಧ್ಯಾಪಕ(ಮೀನುಗಾರಿಕೆ) ರಾಜಣ್ಣ ವಂದಿಸಿದರು. ವಿಜ್ಞಾನಿ ಡಾ.ಎನ್.ಇ.ನವೀನ್ ಕಾರ್ಯಕ್ರಮ ನಿರೂಪಿಸಿದರು. ಸುಮಾರು 70ಕ್ಕೂ ಹೆಚ್ಚು ಶಿಬಿರಾರ್ಥಿಗಳು ತರಬೇತಿಯಲ್ಲಿ ಭಾಗವಹಿಸಿದ್ದರು.