×
Ad

ಉಡುಪಿ ನಗರಸಭೆ ಸಾಮಾನ್ಯಸಭೆ ಕೋರಂ ಕೊರತೆ ಕಾರಣ: ಹೊರ ನಡೆದ ವಿಪಕ್ಷ ಸದಸ್ಯರು

Update: 2017-07-10 22:18 IST

ಉಡುಪಿ, ಜು.10: ಜಟಾಪಟಿಯಿಂದಾಗಿ ಕಳೆದ ಬಾರಿ ಅರ್ಧಕ್ಕೆ ರದ್ದುಗೊಂಡ ಉಡುಪಿ ನಗರಸಭೆ ಸಾಮಾನ್ಯಸಭೆಯು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದಿದ್ದು, ಆದರೆ ವಿರೋಧ ಪಕ್ಷದ ಸದಸ್ಯರು ಕೋರಂ ಕೊರತೆ ಕಾರಣ ಹೇಳಿ ಸಭೆ ಆರಂಭಕ್ಕೆ ಮುನ್ನವೇ ಹೊರ ನಡೆದ ಬಗ್ಗೆ ವರದಿಯಾಗಿದೆ.

ಬೆಳಗ್ಗೆ 11ಗಂಟೆಗೆ ಆರಂಭಗೊಂಡ ಸಭೆಯಲ್ಲಿ 11:15ರವರೆಗೆ ಕೇವಲ 15 ಮಂದಿ ಸದಸ್ಯರು ಮಾತ್ರ ಹಾಜರಿದ್ದರು. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ಸದಸ್ಯರು ಕೋರಂ ಕೊರತೆ ಕಾರಣಕ್ಕೆ ಸಭೆಯಿಂದ ಹೊರ ನಡೆದರು. ವಿರೋಧ ಪಕ್ಷದವರ ಜೊತೆ ಕಳೆದ ಸಭೆಯಲ್ಲಿ ಜಟಾಪಟಿಗೆ ಕಾರಣರಾದ ಕಡಿಯಾಳಿ ವಾರ್ಡಿನ ಸದಸ್ಯೆ ಕಾಂಗ್ರೆಸ್‌ನ ಗೀತಾ ಶೇಟ್ ಕೂಡ ಸಭೆಯಿಂದ ಹೊರ ಹೋದರು. ಬಳಿಕ ಸಭೆಗೆ ಆಡಳಿತ ಪಕ್ಷದ ಒಟ್ಟು 20 ಮಂದಿ ಸದಸ್ಯರು ಹಾಜರಾಗಿದ್ದು, ಈ ಹಿನ್ನೆಲೆಯಲ್ಲಿ ಸಭೆಯನ್ನು ಮುಂದುವರಿಸಲಾಯಿತು. ಸಭೆಯಲ್ಲಿ ಕಾರ್ಯ ಸೂಚಿಯ ಪ್ರಕಾರ ನಿರ್ಣಯಗಳನ್ನು ತೆಗೆದುಕೊಳ್ಳಲಾಯಿತು. ಸಭೆಗೆ ಪತ್ರಕರ್ತರಿಗೆ ಆಹ್ವಾನವಿರಲಿಲ್ಲ. ಈ ಬಗ್ಗೆ ಅವರಿಗೆ ಮಾಹಿತಿಯನ್ನೂ ನೀಡಲಾಗಿರಲಿಲ್ಲ.

ಜೂ.29ರಂದು ನಡೆದ ಸಾಮಾನ್ಯಸಭೆಯಲ್ಲಿ ರಸ್ತೆ ವಿಚಾರಕ್ಕೆ ಸಂಬಂಧಿಸಿದಂತೆ ಸಾಕ್ಷ ಹೇಳಲು ಗೀತಾ ಶೇಟ್ ಕರೆಸಿದ್ದ ನಾಗರಿಕರೊಬ್ಬರನ್ನು ಆಡಳಿತ ಪಕ್ಷದ ಸದಸ್ಯರು ಹೊರ ಹಾಕಿರುವುದು ಸಾಕಷ್ಟು ಗದ್ದಲಕ್ಕೆ ಕಾರಣವಾಗಿ ಸಭೆಯನ್ನು ಅರ್ಧಕ್ಕೆ ರದ್ದುಗೊಳಿಸಲಾಗಿತ್ತು. ‘ಕೋರಂ ಕೊರತೆ ಎಂಬ ಸುಳ್ಳು ಕಾರಣ ಹೇಳಿ ವಿಪಕ್ಷ ಸದಸ್ಯರು ಸಭೆಯಿಂದ ಹೋಗಿದ್ದಾರೆ. ಆದರೆ ನಮ್ಮ 20 ಮಂದಿ ಚುನಾಯಿತ ಸದಸ್ಯರ ಹಾಜರಾತಿ ಯಲ್ಲಿ ನಾವು ಸಭೆ ನಡೆಸಿದ್ದೇವೆ’ ಎಂದು ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ ಪತ್ರಿಕೆಗೆ ತಿಳಿಸಿದರು. ಕಡಿಯಾಳಿ ವಾರ್ಡ್‌ನ ಸದಸ್ಯೆ ಗೀತಾ ಶೇಟ್ ರಿಜಿಸ್ಟ್ರಾರ್ ಮೂಲಕ ರಾಜೀನಾಮೆ ಪತ್ರವನ್ನು ಕಳುಹಿಸಿದ್ದು, ಅದರಲ್ಲಿ ನಗರಸಭೆ ಸದಸ್ಯ ಸ್ಥಾನಕ್ಕೊ ಅಲ್ಲ ಪಕ್ಷಕ್ಕೊ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಅವರ ರಾಜೀನಾಮೆಯನ್ನು ಈವರೆಗೆ ಸ್ವೀಕರಿಸಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News