×
Ad

ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟಕ್ಕೆ 5.58 ಕೋ.ರೂ. ನಿವ್ವಳ ಲಾಭ

Update: 2017-07-11 18:09 IST

ಮಂಗಳೂರು, ಜು.11: ದ.ಕ.ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು ಕಳೆದ ಸಾಲಿನಲ್ಲಿ 741.69 ಕೋ.ರೂ. ವ್ಯವಹಾರ ನಡೆಸಿದ್ದು, 5.58 ಕೋ.ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.

ಮಂಗಳೂರು ಡೇರಿಯ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕ ಮಹಾಮಂಡಲಗಳ 14 ಒಕ್ಕೂಟಗಳ ಪೈಕಿ ದ.ಕ.ಜಿಲ್ಲಾ ಒಕ್ಕೂಟವು ಪ್ರಥಮ ಸ್ಥಾನ ಪಡೆದಿದೆ. ಗುಣಮಟ್ಟದ ಹಾಲು ಸಂಗ್ರಹಣೆಯಲ್ಲೂ ಒಕ್ಕೂಟ ರಾಜ್ಯದಲ್ಲೇ ಪ್ರಥಮ ಸ್ಥಾನ ಗಳಿಸಿದೆ ಎಂದರು.

ರೈತರಿಗೆ ವಿವಿಧ ಯೋಜನೆಯಡಿ 7.65 ಕೋ.ರೂ. ನೆರವು ನೀಡಲಾಗಿದೆ. ಸಿಬ್ಬಂದಿ ವರ್ಗಕ್ಕೆ 3.59 ಕೋ.ರೂ. ಸಹಾಯಧನ ವ್ಯಯಿಸಲಾಗಿದೆ. ಜನಶ್ರೀ ಯೋಜನೆಗೆ 63,620 ಸದಸ್ಯರನ್ನು ಸೇರಿಸಲಾಗಿದೆ. ವಿಮಾ ಪ್ರೀಮಿಯಂ ಮೊತ್ತವನ್ನು ಒಕ್ಕೂಟವೇ ಭರಿಸಿದೆ. ಈ ಸದಸ್ಯರ ಪೈಕಿ 71ಮಂದಿ ಅಪಘಾತ/ ಸಹಜ ಮರಣ ಹೊಂದಿದ್ದು, ಅವರ ಅವಲಂಬಿತ ಕುಟುಂಬಕ್ಕೆ 28.20 ಲಕ್ಷ ರೂ. ಪರಿಹಾರ ವಿತರಿಸಲಾಗಿದೆ. ಜನಶ್ರೀ ಯೋಜನೆಯಡಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ 85.47 ಲಕ್ಷ ರೂ. ವಿದ್ಯಾರ್ಥಿ ವೇತನ ಪಾವತಿಸಲಾಗಿದೆ ಎಂದು ರವಿರಾಜ್ ಹೆಗ್ಡೆ ತಿಳಿಸಿದರು.

ಪ್ರಸ್ತುತ ಸಾಲಿನಲ್ಲಿ ಪ್ರತೀ ದಿನ ಸರಾಸರಿ 3.86 ಲಕ್ಷ ಲೀ. ಹಾಲನ್ನು ಸಂಗ್ರಹಿಸುವ ಮೂಲಕ ಶೇ.10ರ ಪ್ರಗತಿ ಸಾಧಿಸಲಾಗಿದೆ. ಗ್ರಾಹಕರಿಗೆ ಶುದ್ಧ ಮತ್ತು ತಾಜಾ ಹಾಲನ್ನು ಪೂರೈಸಲು ಅನುಕೂಲವಾಗುವಂತೆ 602 ಸಂಘಗಳಲ್ಲಿ ಎಎಂಸಿಯು, 634 ಸಂಘಗಳಲ್ಲಿ ಹಾಲು ಪರೀಕ್ಷಾ ಯಂತ್ರ, 135 ಸಂಘಗಳಲ್ಲಿ ತೂಕದ ಯಂತ್ರಗಳನ್ನು ಅಳವಡಿಸಿ ಪಾರದರ್ಶಕ ಆಡಳಿತ ನಿರ್ವಹಣೆಗೆ ಒತ್ತು ನೀಡಲಾಗಿದೆ ಎಂದು ರವಿರಾಜ್ ಹೆಗ್ಡೆ ಹೇಳಿದರು.

ಆಧುನಿಕ ಹೈನುಗಾರಿಕೆ ಪದ್ಧತಿಯನ್ನು ಅಳವಡಿಸಿಕೊಳ್ಳಲು ಮತ್ತು ಶುದ್ಧ ಹಾಲು ಉತ್ಪಾದನೆಗೆ ಉತ್ತೇಜಿಸಲು ಅನುಕೂಲವಾಗುವಂತೆ 218 ಹಾಲು ಕರೆಯುವ ಯಂತ್ರಕ್ಕೆ 38.12 ಲಕ್ಷ, 55 ಹಟ್ಟಿ ತೊಳೆಯುವ ಯಂತ್ರಕ್ಕೆ 1.25 ಲಕ್ಷ ರೂ., 83 ಸ್ಲರಿ ಪಂಪ್‌ಗಳಿಗೆ 2.05 ಲಕ್ಷ ರೂ., 47 ಹಲ್ಲು ಕತ್ತರಿಸುವ ಯಂತ್ರಕ್ಕೆ 3.40 ಲಕ್ಷ ರೂ., 129 ಅಜೋಲಾ ಘಟಕ ಸ್ಥಾಪನೆಗೆ 3.22 ಲಕ್ಷ ರೂ.ಅನುದಾನ ನೀಡಲಾಗಿದೆ ಎಂದರು.

ರಾಜ್ಯ ಸರಕಾರವು ಹಾಲು ಉತ್ಪಾದಕ ರೈತರಿಗೆ ಪ್ರತೀ 1 ಲೀ. ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿದ್ದು, ಆಧಾರ್ ಲಿಂಕ್ ಹೊಂದಿದ ರೈತರ ಖಾತೆಗಳಿಗೆ 51.18 ಕೋ.ರೂ. ನೇರ ವರ್ಗಾಯಿಸಲಾಗಿದೆ. ಕೆಲವು ಕಡೆ ಸಂವಹನದ ಕೊರತೆಯಿಂದ ರೈತರು ಇದರ ಪ್ರಯೋಜನದಿಂದ ವಂಚಿತರಾಗಿದ್ದು, ಈ ಬಗ್ಗೆ ಬ್ಯಾಂಕ್‌ಗಳ ಪ್ರಧಾನ ಕಚೇರಿ ಜೊತೆ ಮಾತುಕತೆ ನಡೆಸಲಾಗುವುದು.

ರೈತರ ಕಲ್ಯಾಣ ಟ್ರಸ್ಟ್ ಮೂಲಕ ಹಾಲು ಉತ್ಪಾದಕ ಸದಸ್ಯರು ಅಥವಾ ರಾಸು ಮರಣ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಸಾಲಿನಲ್ಲಿ 42.85 ಲಕ್ಷ ರೂ. ಪರಿಹಾರ ನೀಡಲಾಗಿದೆ ಎಂದರು.

ಮುಂದಿನ ದಿನಗಳಲ್ಲಿ ಪ್ರತೀ ದಿನ 3.49 ಲಕ್ಷ ಲೀ. ಹಾಲು ಮತ್ತು 55 ಸಾವಿರ ಕೆ.ಜಿ. ಮೊಸರು ಮಾರಾಟ ಮಾಡುವ ಗುರಿ ಹಾಕಲಾಗಿದೆ. ಉಡುಪಿ ಜಿಲ್ಲೆಯ ಉಪ್ಪೂರಿನಲ್ಲಿ 95 ಕೋ.ರೂ. ವೆಚ್ಚದಲ್ಲಿ 2.5 ಎಲ್‌ಎಲ್‌ಪಿಡಿ ಸಾಮರ್ಥ್ಯದ ಹೊಸ ನೇರ ಘಟಕದ ಸ್ಥಾಪನೆಗೆ ಶಂಕುಸ್ಥಾಪನೆ ಮಾಡಲಾಗಿದೆ. ಮಂಗಳೂರು ಡೇರಿ ಸ್ಥಾವರದಲ್ಲಿ ಅಟೋಮೇಶನ್ ಮಾಡಲು 250 ಲಕ್ಷ ರೂ.ಗಳ ಯೋಜನೆ ರೂಪಿಸಲಾಗಿದೆ.

ಮೊಸರಿನ ಬೇಡಿಕೆಯನ್ನು ಪೂರೈಸಲು 10,000 ಲೀ. ಪ್ಯಾಶ್ಚರೈಸರ್ ಖರೀದಿಗೆ 50 ಲಕ್ಷ ರೂ. ಬಂಡವಾಳ ಹೂಡಿಕೆ ಮಾಡಲಾಗುವುದು. ಸಂಸ್ಕರಿಸಿದ ಹಾಲಿನ ಸಂಗ್ರಹಕ್ಕೆ 20 ಕೆಎಲ್‌ಪಿಎಚ್ ಸಾಮರ್ಥ್ಯದ ಅಟೊಮೆಟಿಕ್ ಡೆಸ್ಲಡ್ಜ್ ಯಂತ್ರ ಖರೀದಿಗೆ 165 ಲಕ್ಷ ರೂ. ಹೂಡಿಕೆ ಮಾಡಲಾಗುವುದು. ಸುವಾಸಿತ ಹಾಲಿನ ಘಟಕ ವಿಸ್ತರಣೆಗೆ ದಿನಂಪ್ರತಿ 2 ಪಾಳಿಗಳಲ್ಲಿ 30,000 ಪೆಟ್ ಬಾಟಲುಗಳಲ್ಲಿ (200 ಮಿ.ಮೀ.) ಹಾಲಿನ ಸಂಸ್ಕರಣೆ, ಪ್ಯಾಕಿಂಗ್ ಕೈಗೊಳ್ಳಲು ಬೇಕಾದ ಯಂತ್ರಗಳ ಖರೀದಿಗೆ 120 ಲಕ್ಷ ರೂ. ಅವಕಾಶ ಕಲ್ಪಿಸಲಾಗಿದೆ.

ಪುತ್ತೂರಿನ ಶೀತಲೀಕರಣ ಘಟಕದಲ್ಲಿ 2 ಲೈನ್‌ಗಳಲ್ಲಿ ಹಾಲನ್ನು ಸ್ವೀಕರಿಸಲು ಹೊಸ ಕಟ್ಟಡ ಮತ್ತು ಇಟಿಪಿ ಸ್ಥಾವರ ನಿರ್ಮಾಣಕ್ಕೆ, ಯಂತ್ರಗಳ ಖರೀದಿಗೆ 175 ಲಕ್ಷ ರೂ. ಹೂಡಿಕೆ ಮಾಡಲಾಗುವುದು. ಪುತ್ತೂರಿನಲ್ಲಿ ಹೊಸ ಶಿಬಿರ ಕಚೇರಿಗೆ ಜಾಗ ಖರೀದಿ ಮತ್ತು ಕಟ್ಟಡ ನಿರ್ಮಾಣಕ್ಕೆ 500 ಲಕ್ಷ ರೂ. ಅವಕಾಶ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಆಡಳಿತ ನಿರ್ದೇಶಕ ಡಾ. ಸತ್ಯನಾರಾಯಣ, ನಿರ್ದೇಶಕರಾದ ಕಾಪು ದಿವಾಕರ ಶೆಟ್ಟಿ, ಸೀತಾರಾಮ ಸವಣೂರು, ನಾರಾಯಣ ಪ್ರಕಾಶ್, ಪದ್ಮನಾಭ ಶೆಟ್ಟಿ, ನರಹರಿ ಪ್ರಭು, ಸುಚರಿತ ಶೆಟ್ಟಿ, ರಾಜೇಶ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News