×
Ad

ಐಸಿಸ್‌ಗೆ ನೆರವು ನೀಡಿದ ಅಮೆರಿಕ ಸೈನಿಕನ ಸೆರೆ

Update: 2017-07-11 19:33 IST

ವಾಶಿಂಗ್ಟನ್, ಜು. 11: ಇರಾಕ್ ಮತ್ತು ಅಫ್ಘಾನಿಸ್ತಾನಗಳಲ್ಲಿ ಸೇವೆ ಸಲ್ಲಿಸಿದ್ದ ಅಮೆರಿಕ ಸೇನೆಯ ಸಾರ್ಜಂಟ್ ಒಬ್ಬನನ್ನು ಐಸಿಸ್ ಭಯೋತ್ಪಾದಕರಿಗೆ ಸಾಮಗ್ರಿ ನೆರವು ನೀಡಿದ ಆರೋಪದಲ್ಲಿ ಬಂಧಿಸಲಾಗಿದೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ಸೋಮವಾರ ತಿಳಿಸಿದೆ.

25ನೆ ಪದಾತಿ ವಿಭಾಗದ 25ನೆ ಕೋಂಬ್ಯಾಟ್ ಏವಿಯೇಶನ್ ಬ್ರಿಗೇಡ್‌ನಲ್ಲಿ ಕೆಲಸ ಮಾಡುತ್ತಿದ್ದ 34 ವರ್ಷದ ಇಕೈಕ ಕಾಂಗ್ ವಿರುದ್ಧ ಸೇನೆ ಮತ್ತು ಎಫ್‌ಬಿಐ ಒಂದು ವರ್ಷಕ್ಕೂ ಹೆಚ್ಚಿನ ಅವಧಿಯಿಂದ ತನಿಖೆ ನಡೆಸುತ್ತಿದ್ದವು. ಶನಿವಾರ ಆತನನ್ನು ಎಫ್‌ಬಿಐ ತನ್ನ ಕಸ್ಟಡಿಗೆ ತೆಗೆದುಕೊಂಡಿತ್ತು ಎಂದು ಎಫ್‌ಬಿಐ ‘ರಾಯ್ಟರ್ಸ್’ಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದೆ.

ಕಾಂಗ್ ಐಸಿಸ್‌ಗೆ ನಿಷ್ಠೆ ಹೊಂದುವ ಪ್ರತಿಜ್ಞೆಗೈದಿದ್ದಾನೆ ಎಂಬುದಾಗಿ ಹೊನೊಲುಲುವಿನಲ್ಲಿರುವ ಅಮೆರಿಕದ ಜಿಲ್ಲಾ ನ್ಯಾಯಾಲಯದಲ್ಲಿ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆಯಲ್ಲಿ ಹೇಳಲಾಗಿದೆ.

ಆತ ಐಸಿಸ್‌ಗೆ ಸೇನಾ ದಾಖಲೆಗಳು ಮತ್ತು ತರಬೇತಿಯನ್ನೂ ಕೊಡಲು ಯತ್ನಿಸಿದ್ದ ಎಂಬ ಆರೋಪಗಳಿವೆ ಎಂದು ಹೇಳಿಕೆಯೊಂದರಲ್ಲಿ ಎಫ್‌ಬಿಐ ತಿಳಿಸಿದೆ.

ಏರ್ ಟ್ರಾಫಿಕ್ ಕಂಟ್ರೊಲ್ ಪರಿಣತನಾಗಿರುವ ಕಾಂಗ್, ಕರ್ತವ್ಯದ ಮೇಲೆ ಮೂರು ಬಾರಿ ವಿದೇಶಕ್ಕೆ ಹೋಗಿದ್ದಾನೆ. 2002-03ರಲ್ಲಿ ದಕ್ಷಿಣ ಕೊರಿಯಕ್ಕೆ ಹೋಗಿದ್ದರೆ, 2010-11ರಲ್ಲಿ ಇರಾಕ್ ಮತ್ತು 2013-14ರಲ್ಲಿ ಅಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News