ಪಂಚಾಯತ್‌ರಾಜ್ ಇಲಾಖೆ ಕಾರ್ಯವೈಖರಿಗೆ ಜಿಪಂ ಅಸಮಧಾನ
ಉಡುಪಿ, ಜು.11: ಗ್ರಾಮೀಣ ನೀರು ಮತ್ತು ನೈರ್ಮಲ್ಯ ವಿಭಾಗದಿಂದ ಈವರೆಗೆ ಗ್ರಾಮೀಣ ಪ್ರದೇಶಗಳಲ್ಲಿ 15 ಕೊಳವೆ ಬಾವಿ, 129 ತೆರೆದ ಬಾವಿಗಳನ್ನು ಪೂರ್ಣಗೊಳಿಸಿದ್ದು, 2 ನಳ್ಳಿ ನೀರು ಸರಬರಾಜು ಯೋಜನೆ, 12 ಕಿರುನೀರು ಸರಬರಾಜು ಯೋಜನೆ ಹಾಗೂ 278 ಮುಂದುವರಿದ ಪೈಪ್‌ಲೈನ್ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಉಡುಪಿ ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ (ಪಿಆರ್‌ಇಡಿ) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಮಣಿಪಾಲದಲ್ಲಿರುವ ಜಿಪಂನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಮಂಗಳವಾರ ನಡೆದ ಜೂನ್ ತಿಂಗಳ ಕರ್ನಾಟಕ ಅಭಿವೃಧ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಇಂಜಿನಿಯರ್ ಅವರು, ಕುಡಿಯುವ ನೀರು ಕಾಮಗಾರಿಯಲ್ಲಿ ಪೂರ್ಣಗೊಳಿಸಿರುವ ಕಾಮಗಾರಿಗಳ ಮಾಹಿತಿಯನ್ನು ನೀಡಿದರು.
ಜಿಲ್ಲೆಯ 8 ಸ್ಥಳಗಳಲ್ಲಿ ನೀರು ಶುದ್ಧೀಕರಣ ಘಟಕಗಳು ಕಾರ್ಯನಿರ್ವ ಹಿಸುತ್ತಿವೆ. ಉಡುಪಿ ತಾಲೂಕಿನ ಶಿರ್ವ, ಪಡುಬಿದ್ರೆ, ಕಟಪಾಡಿಯಲ್ಲಿ 3 ನೀರು ಶುದ್ಧೀಕರಣ ಘಟಕ, ಕುಂದಾಪುರ ತಾಲೂಕಿನ ಅಮಾಸೆಬೈಲು, ಮರವಂತೆ, ಸಿದ್ದಾಪುರದಲ್ಲಿ, ಕಾರ್ಕಳ ತಾಲೂಕಿನ ಮಿಯಾರು ಹಾಗೂ ನಿಟ್ಟೆ ಗ್ರಾಪಂ ಗಳಲ್ಲಿ ಈ ನೀರು ಶುದ್ಧೀಕರಮ ಘಟಕಗಳಿವೆ ಎಂದು ಮಾಹಿತಿ ನೀಡಲಾಯಿತು.
ಅಧ್ಯಕ್ಷರ ಅಸಮಧಾನ:
ಇಂಜಿನಿಯರ್‌ಗಳು ಕಾಮಗಾರಿ ಮತ್ತು ಅನುದಾನ ಅನುಷ್ಠಾನಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷರಿಂದ ಪ್ರಗತಿ ಪರಿಶೀಲನೆ ನಡೆಸಿಲ್ಲ. ಹಲವು ಬಾರಿ ಮಾಹಿತಿ ಕೋರಿದ್ದರೂ ನೀಡುತ್ತಿಲ್ಲ ಎಂದು ಜಿಪಂ ಅಧ್ಯಕ್ಷರು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಪ್ರಗತಿ, ಅನುದಾನ ಬಿಡುಗಡೆ ಬಗ್ಗೆ ಸಮಗ್ರ ಮಾಹಿತಿ ನೀಡಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಪ್ರಸಕ್ತ ಸಾಲಿನ ಅನುದಾನ ಬಿಡುಗಡೆಗೆ ಸಂಬಂಧಿಸಿದಂತೆ ಕ್ರಿಯಾಯೋಜನೆ ಕುರಿತು ಚರ್ಚಿಸಿ ಎಂದು ಆದೇಶಿಸಿದರು.
ವಸತಿ ಯೋಜನೆಯಲ್ಲಿ ಉಡುಪಿ ಜಿಲ್ಲೆ 27ನೇ ಸ್ಥಾನಕ್ಕೆ ಇಳಿದಿರುವ ಬಗ್ಗೆ ಸಭೆ ಕಳವಳ ವ್ಯಕ್ತಪಡಿಸಿತು. ವಸತಿ ಯೋಜನೆ ಫಲಾನುಭವಿಗಳೊಂದಿಗೆ ನೇರ ಮಾತುಕತೆ ನಡೆಸಿ ಸಮಸ್ಯೆಗಳನ್ನು ಪರಿಹರಿಸಿ ಎಂದು ವಸತಿ ಯೋಜನೆಯ ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ನಿರ್ದೇಶನ ನೀಡಿದರು. ಆದರೆ ವಸತಿ ಸಮಸ್ಯೆಗೆ ಮರಳು ಕೊರತೆಯೇ ಕಾರಣ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ ಗಮನಸೆಳೆದರು. ನಿಜವಾದ ಕಾರಣವನ್ನು ಬದಿಗಿಟ್ಟು ಚರ್ಚೆ ನಡೆಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಮರಳು ಸಮಸ್ಯೆಯಿಂದ ಜಿಲ್ಲೆಯ ಜನರಿಗೆ ಬಹಳ ತೊಂದರೆಯಾಗಿದೆ ಎಂದರು.
ಪಿಆರ್‌ಇಡಿ, ಕೆಆರ್‌ಐಡಿಎಲ್ ಮತ್ತು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಮುಂದಿನ ಸಭೆಗೆ ಮರಳು ನೀಡಿದವರ ಸಮಗ್ರ ಮಾಹಿತಿ ತನ್ನಿ ಎಂದು ಪ್ರಿಯಾಂಕ ಮೇರಿ ಫ್ರಾನ್ಸಿಸ್ ಆದೇಶಿಸಿದರು.
21,000 ಹೆಕ್ಟೇರ್‌ನಲ್ಲಿ ಬಿತ್ತನೆ: ಕೃಷಿಯಲ್ಲಿ ಜಿಲ್ಲೆಯ ಸ್ಥಿತಿಗತಿಯ ಕುರಿತು ವಿವರಿಸಿದ ಇಲಾಖೆ ಜಂಟಿ ನಿರ್ದೇಶಕರು,ಜಿಲ್ಲೆಯಲ್ಲಿ ವಾಡಿಕೆ ಮಳೆಯಾಗಿದ್ದು, ಬಿತ್ತನೆ ಪ್ರಗತಿಯಲ್ಲಿದೆ. ಜೂನ್ ಅಂತ್ಯಕ್ಕೆ 21,745 ಹೆಕ್ಟೇರ್ ಬಿತ್ತನೆಯಾಗಿದ್ದು, 23,110 ಹೆಕ್ಟೇರ್‌ನ ಗುರಿ ಇದೆ ಎಂದು. ಬಿತ್ತನೆ ಬೀಜ ಗುರಿ 1878 ಕ್ವಿಂಟಾಲ್ ಇದ್ದು, ವಿತರಣೆಯಾಗಿದೆ. ಇನ್ನೂ 60.80 ಕ್ವಿಂಟಾಲ್ ಬೀಜ ದಾಸ್ತಾನಿದೆ. 3,646 ಕ್ವಿಂಟಾಲ್ ರಸಗೊಬ್ಬರಕ್ಕೆ ಇದ್ದು, 2,627ಕ್ವಿ. ಸರಬರಾಜಾಗಿದೆ. 854 ಟನ್ ದಾಸ್ತಾನಿದೆ ಎಂದರು.
ಜಿಲ್ಲೆಯಲ್ಲಿ ಎನ್‌ಆರ್‌ಇಜಿಯಡಿ ಶೇ.55 ಸಾಧನೆಯಾಗಿದ್ದು, ಈ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಹಣಪಾವತಿಯಲ್ಲಿ ವಿಳಂಬವಾಗಬಾರದು ಎಂದ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ತಿಳಿಸಿದರು. ನಿಗದಿತ ಸಮಯದೊಳಗೆ ಹಣ ಪಾವತಿಸುವಂತೆ ತಾಪಂ ಕಾರ್ಯನಿರ್ವಹಣಾಧಿಕಾರಿಗಳು ನೋಡಿಕೊಳ್ಳ ಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.