ಜಿಲ್ಲೆಯ ಅಹಿತಕರ ಘಟನೆಗಳ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ವರದಿ: ಡಿವಿ
ಮಂಗಳೂರು, ಜು. 11: ದ.ಕ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದಿರುವ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಜಿಲ್ಲೆಯ ಕಾನೂನು ಸುವ್ಯವಸ್ಥೆಯ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ವರದಿ ಸಲ್ಲಿಸುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.
ನಗರದಲ್ಲಿ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವರಿಷ್ಠಾಧಿಕಾರಿಯವರಲ್ಲಿ ಚರ್ಚಿಸಿದ್ದೇವೆ. ಕಳೆದ ಒಂದೂವರೆ ತಿಂಗಳ ಜಿಲ್ಲೆಯ ವಿದ್ಯಮಾನಕ್ಕೆ ಸಂಬಂಧಿಸಿ ಜಿಲ್ಲೆಯ ಬಗ್ಗೆ ರಾಜ್ಯ ಮತ್ತು ದೇಶಕ್ಕೆ ತಪ್ಪು ಸಂದೇಶ ರವಾನೆಯಾಗಿದೆ ಎಂದರು.
ರಮಾನಾಥ ರೈ ಕಾರಣ:
ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಅನಾಹುತಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರು ನೇರ ಕಾರಣರಾಗಿದ್ದಾರೆ ಎಂದು ಡಿವಿ ಆರೋಪಿಸಿದರು.
ಅವರ ಪ್ರಚೋದನೆಯಿಂದಾಗಿಯೇ ಜಿಲ್ಲೆಯಲ್ಲಿ ಅಹಿತಕರ ಘಟನೆಗಳು ಮರುಕಳಿಸಿವೆ. ಜಿಲ್ಲೆಯ ಮಂತ್ರಿಗಳು ತಾನು ನಡೆದದ್ದೇ ದಾರಿ, ಹೇಳಿದ್ದೇ ಕಾನೂನು ಎಂಬಂತೆ ದುರಹಂಕಾರದ ಆಡಳಿತ ನಡೆಸುತ್ತಿದ್ದಾರೆ. ಇವರ ಈ ಆಡಳಿತ ವೈಖರಿಗೆ ಜಿಲ್ಲೆ ಬಲಿಯಾಗುತ್ತಿದೆ ಎಂದು ಅವರು ಹೇಳಿದರು.
ರೈಯವರ ಸವಾಲು ಸ್ವೀಕರಿಸುತ್ತೇನೆ:
'ಡಿ.ವಿ. ಸದಾನಂದ ಗೌಡರು ತನ್ನೆದೆರು ಸ್ಪರ್ಧಿಸಲಿ' ಎಂಬ ಸಚಿವ ರಮಾನಾಥ ರೈ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಸದಾನಂದ ಗೌಡರು, ‘‘ನಾನೇಕೆ ಅವರ ಎದುರು ಸ್ಪರ್ಧಿಸಲಿ. ನಾನು ಬೂತ್ ಮಟ್ಟದ ಸಾಮಾನ್ಯ ಕಾರ್ಯಕರ್ತನನ್ನು ಅವರೆದುರು ಸ್ಪರ್ಧಿಸಿ ಗೆಲ್ಲಿಸುತ್ತೇನೆ. ಈ ಮೂಲಕ ರೈ ಅವರ ಸಾವಾಲನ್ನು ಸ್ವೀಕರಿಸುತ್ತೇನೆ’’ ಎಂದರು.
ಸೆಕ್ಷನ್ 144 ಹಿಂಪಡೆಯಲು ಆಗ್ರಹ:
ಬಂಟ್ವಾಳ ತಾಲೂಕಿನಲ್ಲಿ ನಡೆದ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಇತರ ತಾಲೂಕುಗಳಿಗೆ 47 ದಿನಗಳ ಕಾಲ ಸೆಕ್ಷನ್ 144 ವಿಸ್ತರಿಸಿರುವುದನ್ನು ಖಂಡಿಸಿದ ಕೇಂದ್ರ ಸಚಿವರು, ಇತರ ತಾಲೂಕುಗಳಲ್ಲಿ ವಿಧಿಸಲಾಗಿರುವ ಸೆ.144ನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಗಲಾಟೆಯಾದರೆ, ನಮ್ಮ ತಾಲೂಕಿಗೆ ಯಾಕೆ ಸೆಕ್ಷನ್. ನಾವೇನು ಮಾಡಿದ್ದೇವೆ ಎಂದು ಪುತ್ತೂರು, ಸುಳ್ಯ ತಾಲೂಕುಗಳ ಜನರು ಕೇಳುವಂತಾಗಿದೆ.
ಸುಳ್ಯ, ಪುತ್ತೂರು, ಬೆಳ್ತಂಗಡಿ ತಾಲೂಕುಗಳ ಸಹಿತ ಸುರತ್ಕಲ್ ವ್ಯಾಪ್ತಿಯಲ್ಲಿ ಹೇರಲಾಗಿರುವ ಸೆಕ್ಷನ್ 144ನ್ನು ಹಿಂಪಡೆಯಬೇಕೆಂದು ಡಿವಿ ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಸಚಿವರು ಶಾಂತಿ ಕಾಂಪಾಡುವಂತೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ನಾಗರಾಜ್ ಶೆಟ್ಟಿ, ಶಾಸಕ ಎಸ್.ಅಂಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು, ಬಿಜೆಪಿ ಮುಖಂಡರಾದ ಮೋನಪ್ಪ ಭಂಡಾರಿ, ರುಕ್ಮಯ ಪೂಜಾರಿ, ಉದಯ ಕುಮಾರ್ ಶೆಟ್ಟಿ, ಸುನಿಲ್ ಕುಮಾರ್, ಕ್ಯಾ.ಗಣೇಶ್ ಕಾರ್ಣಿಕ್ ಮೊದಲಾದವರು ಉಪಸ್ಥಿತರಿದ್ದರು.