‘ಭ್ರಷ್ಟಾಚಾರ ಆರೋಪಗಳಿಗೆ ಉತ್ತರಿಸಿ ಇಲ್ಲವೇ ತೊಲಗಿ’ : ತೇಜಸ್ವಿ ಯಾದವ್ ಗೆ ನಿತೀಶ್ ಸಂದೇಶ

Update: 2017-07-11 14:45 GMT

ಪಾಟ್ನಾ,ಜು.11: ಮಿತ್ರ ಲಾಲು ಪ್ರಸಾದ್ ಯಾದವ ಮತ್ತು ತನ್ನ ಸರಕಾರದಲ್ಲಿ ನಂ.2 ಆಗಿರುವ ಅವರ ಪುತ್ರ ತೇಜಸ್ವಿ ಯಾದವ ಅವರಿಂದ ತಾನೇನನ್ನು ಬಯಸುತ್ತಿದ್ದೇನೆ ಎನ್ನುವುದನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಬಹಿರಂಗಗೊಳಿಸಿದ್ದಾರೆ. ‘‘ ಭ್ರಷ್ಟಾಚಾರ ಆರೋಪಗಳನ್ನು ಎದುರಿಸುತ್ತಿರುವವರು ಜನತೆಗೆ ಉತ್ತರಿಸಬೇಕು ಮತ್ತು ಆರೋಪಗಳಿಂದ ಹೊರಗೆ ಬರಬೇಕು. ಅದು ಆಗುತ್ತದೆ ಎಂದು ನಮಗೆ ವಿಶ್ವಾಸವಿದೆ ’’ ಎಂದು ಮಂಗಳವಾರ ಇಲ್ಲಿ ಜೆಡಿಯುದ ಸುದೀರ್ಘ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ನೀರಜಕುಮಾರ್ ಅವರು ಹೇಳಿದರು.

ಬಿಹಾರದ ಉಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಜೆಡಿಯು ನೇರವಾಗಿ ಸೂಚಿಸಿಲ್ಲ,ಆದರೆ ಹಾಗೆ ಮಾಡುವುದು ಸೂಕ್ತ ಎಂದು ಪರೋಕ್ಷವಾಗಿ ಹೇಳಿದೆ.

‘‘ಈ ಹಿಂದೆ ಹಲವಾರು ಪ್ರಕರಣಗಳಲ್ಲಿ ಭ್ರಷ್ಟಾಚಾರದ ಆರೋಪಗಳಿಗೆ ಗುರಿಯಾಗಿದ್ದ ನಮ್ಮದೇ ಪಕ್ಷದ ಸಚಿವರ ರಾಜೀನಾಮೆಗಳನ್ನು ಪಡೆದಿರುವ ಪೂರ್ವ ನಿದರ್ಶನವಿದೆ’’ ಎಂದು ನೀರಜಕುಮಾರ್ ತಿಳಿಸಿದರು.

ತನ್ನ ಕುಟುಂಬವು ಪಟ್ನಾದಲ್ಲಿ ಅಗ್ಗದ ಬೆಲೆಯಲ್ಲಿ ಮೂರು ಎಕರೆ ಜಮೀನನ್ನು ಸ್ವಾಧೀನ ಪಡಿಸಿಕೊಳ್ಳುವಲ್ಲಿ ನೆರವಾಗಲು ಲಾಲು ಪ್ರಸಾದ್ ಹಿಂದಿನ ತನ್ನ ರೈಲ್ವೆ ಸಚಿವ ಸ್ಥಾನವನ್ನು ಬಳಸಿದ್ದರು ಎಂಬ ಆರೋಪದಲ್ಲಿ ಸಿಬಿಐ ಶುಕ್ರವಾರ ಅವರ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಗಳ ಪಕ್ಷ ಜೆಡಿಯು ಪ್ರತಿಕ್ರಿಯಿ ಸಿದೆ. ತೇಜಸ್ವಿ ಯಾದವ ಈ ಜಮೀನಿನ ಭಾಗಶಃ ಮಾಲಿಕರಾಗಿದ್ದಾರೆ.

ಮಂಗಳವಾರದ ಸಭೆಯಲ್ಲಿ ನಿತೀಶ ಇತರ ಪ್ರತಿಪಕ್ಷ ನಾಯಕರಂತೆ ಲಾಲು ವಿರುದ್ಧ ಸಿಬಿಐ ದಾಳಿ ಕೇಂದ್ರದ ರಾಜಕೀಯ ಪ್ರತೀಕಾರ ಕ್ರಮವಾಗಿದೆ ಎಂದು ಖಂಡಿಸಲಿಲ್ಲ. ದಾಳಿ ನಡೆದು ಕೆಲವು ದಿನಗಳಾದರೂ ನಿತೀಶ ಗಾಢವೌನ ವಹಿಸಿದ್ದರು, ಅಷ್ಟೇ ಅಲ್ಲ...ಯಾವುದೇ ಪ್ರತಿಕ್ರಿಯೆ ನೀಡದಂತೆ ಜೆಡಿಯು ನಾಯಕರಿಗೆ ತಾಕೀತನ್ನೂ ಮಾಡಿದ್ದರು. ಹೀಗಾಗಿ ಬಿಹಾರವನ್ನು ಆಳುತ್ತಿರುವ ಮಹಾ ಮೈತ್ರಿಕೂಟವು ರಾಜಕೀಯ ದಿವಾಳಿತನದತ್ತ ಸಾಗುತ್ತಿದೆಯೇ ಎಂಬ ಕುತೂಹಲ ಗರಿಗೆದರಿತ್ತು.

ಲಾಲುಗೆ ಸಂಭಾವ್ಯ ಅಪಾಯ ಸದ್ಯಕ್ಕೆ ತಪ್ಪಿರುವಂತಿದೆ. ‘‘ಸಮ್ಮಿಶ್ರ ಧರ್ಮವನ್ನು ಹೇಗೆ ಪಾಲಿಸಬೇಕು ಎನ್ನುವುದು ನಮಗೆ ಗೊತ್ತು. ನಾವದನ್ನು ಕೊನೆಯುಸಿರು ಇರುವವರೆಗೂ ಅನುಸರಿಸುತ್ತೇವೆ. ಆದರೆ ಸಾರ್ವಜನಿಕವಾಗಿ ಭ್ರಷ್ಟಾಚಾರ ಆರೋಪಗಳಿಗೆ ಉತ್ತರಿಸಲಾ ಗುತ್ತದೆ ಎಂದು ನಾವು ಆಶಿಸಿದ್ದೇವೆ ’’ಎಂದು ನೀರಜಕುಮಾರ್ ಹೇಳಿದರು.

ಸೋಮವಾರ ಸಭೆ ಸೇರಿದ್ದ ಆರ್‌ಜೆಡಿ, ಸಿಬಿಐ ದಾಳಿಗಳ ಕಾರಣಕ್ಕಾಗಿ ತೇಜಸ್ವಿ ಯಾದವ ರಾಜೀನಾಮೆ ನೀಡುವುದಿಲ್ಲ ಎಂದು ಘೋಷಿಸಿತ್ತು. ಸಿಬಿಐ ಸುಳ್ಳು ಆರೋಪ ಸೃಷ್ಟಿಸಿದೆ ಮತ್ತು ಜಮೀನಿನ ಸ್ವಾಧೀನ ನಡೆದಿತ್ತು ಎನ್ನಲಾದ ಸಂದರ್ಭದಲ್ಲಿ ತೇಜಸ್ವಿ ಇನ್ನೂ ಅಪ್ರಾಪ್ತ ವಯಸ್ಕನಾಗಿದ್ದ ಎಂದು ಲಾಲು ಸಮರ್ಥಿಸಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News