ಕಾಂಗ್ರೆಸ್-ಬಿಜೆಪಿ ಪರಸ್ಪರ ಗೂಬೆ: ಮಾನವ ಸಮಾನತ್ ಮಂಚ್ ಖಂಡನೆ
ಮಂಗಳೂರು, ಜು.11: ದ.ಕ.ಜಿಲ್ಲೆಯ ಬಂಟ್ವಾಳ ಮತ್ತಿತ್ಯಾದಿ ಕಡೆ ಕಳೆದ 2 ತಿಂಗಳಿನಿಂದ ಅಹಿತಕರ ಘಟನೆ ನಡೆಯುತ್ತಿದ್ದರೂ ಅದನ್ನು ನಿಯಂತ್ರಿಸುವ ಬದಲು ರಾಷ್ಟ್ರೀಯ ಪಕ್ಷವಾಗಿರುವ ಕಾಂಗ್ರೆಸ್ ಮತ್ತು ಬಿಜೆಪಿ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿಸಿಕೊಂಡಿವೆ ಎಂದು ಮಾನವ ಸಮಾನತ್ ಮಂಚ್ ತಿಳಿಸಿದೆ.
ಜಿಲ್ಲೆಯ ಇತಿಹಾಸದಲ್ಲಿ ಇಷ್ಟು ದೀರ್ಘವಾಗಿ ಸೆ.144 ಹಾಕಿದ ಉದಾಹರಣೆ ಇಲ್ಲ. ಆದರೆ, ರಾಜ್ಯ ಸರಕಾರ ಜಿಲ್ಲಾಡಳಿತದ ಮೂಲಕ ಸೆ.144 ಹಾಕಿಸಿ ಜಿಲ್ಲೆಯ ಜನತೆಯ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದಾರೆ.
ಬಂಟ್ವಾಳ, ಕಲ್ಲಡ್ಕ, ಬಿ.ಸಿ.ರೋಡ್, ತುಂಬೆ ಆಸುಪಾಸಿನ ಜನರು ಅದರಲ್ಲೂ ಮಹಿಳೆಯರು, ಮಕ್ಕಳು ಭಯದ ವಾತಾವರಣದಲ್ಲಿದ್ದಾರೆ. ಅಂಗಡಿ ವ್ಯಾಪಾರಿಗಳು ಅತಂತ್ರಾಗಿದ್ದಾರೆ. ಈ ಪಕ್ಷಗಳ ಮುಖಂಡರು ಪರಸ್ಪರ ಗೂಬೆ ಕೂರಿಸುವ ಬದಲು ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಗೆ ಮುಂದಾಗಬೇಕಿತ್ತು. ಆದರೆ, ಅದು ಬಿಟ್ಟು ಮುಂದಿನ ಚುನಾವಣೆಯ ದೃಷ್ಟಿಕೋನದಿಂದ ಎರಡೂ ಪಕ್ಷಗಳ ಮುಖಂಡರು ನೀಡುತ್ತಿರುವ ಹೇಳಿಕೆಗಳು ಶೋಭೆ ತರುವಂತದ್ದಲ್ಲ.
ಜಿಲ್ಲಾಡಳಿತ ಸಹಿತ ಪೊಲೀಸ್ ಇಲಾಖೆಯು ಯಾವುದೇ ಒತ್ತಡಕ್ಕೆ ಮಣಿಯದೆ ಜನಪರವಾಗಿ ಕೆಲಸ ಮಾಡಬೇಕು ಎಂದು ಮಾನವ ಸಮಾನತ್ ಮಂಚ್‌ನ ಅಲಿ ಹಸನ್ ಆಗ್ರಹಿಸಿದ್ದಾರೆ.