ಕಟ್ಟಡದ ಮೇಲಿಂದ ಬಿದ್ದು ಪೈಂಟಿಂಗ್ ಕಾರ್ಮಿಕ ಮೃತ್ಯು
ಪುತ್ತೂರು, ಜು.11: ಪೈಟಿಂಗ್ ಕೆಲಸದಲ್ಲಿ ನಿರತರಾಗಿದ್ದ ಯುವಕನೊಬ್ಬ ಪೈಟಿಂಗ್ ಮಾಡಲು ಸೊಂಟಕ್ಕೆ ಅಳವಡಿಸಲಾಗಿದ್ದ ಬೆಲ್ಟ್‌ನ ಹಗ್ಗ ತುಂಡಾದ ಪರಿಣಾಮವಾಗಿ ಕಟ್ಟಡದ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟ ಘಟನೆ ಪುತ್ತೂರು ನಗರದ ಕಲ್ಲಿಮಾರ್ ಎಂಬಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಕರ್ಮಲ ನಿವಾಸಿ ವೆಂಕಟೇಶ್ ಅವರ ಪುತ್ರ ಇತೀಶ್ (22) ಮೃತಪಟ್ಟ ಯುವಕ. ಇತೀಶ್ ಅವರು ಕಲ್ಲಿಮಾರಿನಲ್ಲಿರುವ ಕಟ್ಟಡವೊಂದಕ್ಕೆ ಪೈಟಿಂಗ್ ಮಾಡುವ ಕೆಲಸದಲ್ಲಿ ನಿರತರಾಗಿದ್ದರು. ಸೊಂಟಕ್ಕೆ ಬೆಲ್ಟ್ ಅಳವಡಿಸಿಕೊಂಡು ಕಟ್ಟಡದ ಗೋಡೆಗೆ ಪೈಟಿಂಗ್ ಮಾಡುತ್ತಿದ್ದ ವೇಳೆ ಸೊಂಟಕ್ಕೆ ಅಳವಡಿಸಲಾಗಿದ್ದ ಬೆಲ್ಟ್ ನ ಹಗ್ಗ ತುಂಡಾದ ಪರಿಣಾಮ ಅವರು ಕಟ್ಟಡದ ಮೇಲಿಂದ ಕೆಳಗೆ ಬಿದ್ದಿದ್ದರೆಂದು ತಿಳಿದು ಬಂದಿದೆ.
ಗಂಭೀರ ಗಾಯಗೊಂಡ ಇತೀಶ್ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ವೇಳೆ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತನ ತಂದೆ ವೆಂಕಟೇಶ್ ಅವರು ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.