ಮೂವರು ಆರೋಪಿಗಳಿಗೆ ಜು.24ರವರೆಗೆ ನ್ಯಾಯಾಂಗ ಬಂಧನ
ಉಡುಪಿ, ಜು.11: ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಜು.5ರಂದು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಪ್ರಕರಣದ ಮೂವರು ಆರೋಪಿಗಳಿಗೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜು.24ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.
ಆರೋಪಿಗಳಾದ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದ ರಾಣೆಬೆನ್ನೂರು ಘಟಕದ ಚಾಲಕ/ನಿರ್ವಾಹಕನಾಗಿರುವ ರಾಣೆ ಬೆನ್ನೂರು ಬನಶಂಕರಿ ನಗರದ ರಾಘವೇಂದ್ರ ಪ್ರಭಾಕರ ಬಡಿಗೇರಾ ಯಾನೆ ರಾಘು(35) ಎಂಬಾತನನ್ನು ರಾಣೆಬೆನ್ನೂರು ಬಸ್ ನಿಲ್ದಾಣದ ಬಳಿ ಹಾಗೂ ಹೀರೆಕೆರೆಯೂರು ಘಟಕದ ಚಾಲಕ/ನಿರ್ವಾಹಕನಾಗಿರುವ ಅದೇ ತಾಲೂಕಿನ ರಟ್ಟೆಹಳ್ಳಿಯ ಯುವರಾಜ್ ಕಟ್ಟೆಕಾರ್(35) ಮತ್ತು ಹೀರೆಕೆರೆಯೂರು ಘಟಕದ ಚಾಲಕ/ನಿರ್ವಾಹಕನಾಗಿರುವ ಒಡೆಯರಹಳ್ಳಿಯ ವೀರಯ್ಯ ಆರ್.ಹಿರೇಮಠ (41) ಎಂಬವರನ್ನು ಹಿರೇಕೆರೂರು ಬಸ್ ನಿಲ್ದಾಣದ ಬಳಿ ಜು.9ರಂದು ಉಡುಪಿ ಪೊಲೀಸರು ಬಂಧಿಸಿದ್ದರು.
ಬಂಧಿತ ಆರೋಪಿಗಳನ್ನು ಉಡುಪಿಗೆ ಕರೆದುಕೊಂಡು ಬಂದ ಪೊಲೀಸರು ಜು.10ರಂದು ಸಂಜೆ ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದರು. ಬಳಿಕ ಆರೋಪಿಗಳನ್ನು ಹಿರಿಯಡ್ಕ ಕಾರಾಗೃಹಕ್ಕೆ ರವಾನಿಸಲಾಯಿತು.
ಬಾಲಕಿ ನಾಪತ್ತೆ ದೂರು: ಉಡುಪಿ ಎಂಜಿಎಂ ಕಾಲೇಜಿನ ಬಳಿ ವಾಸ್ತವ್ಯ ಇರುವ ಬೆಳಗಾಂ ಮೂಲದ 15ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿ ಜು.5 ರಂದು ಬೆಳಗ್ಗೆ 11ಗಂಟೆಗೆ ಮನೆಯಿಂದ ಕಾಣೆಯಾಗಿರುವುದಾಗಿ ಪೋಷಕರು ನೀಡಿದ ದೂರಿನಂತೆ ಜು.6 ರಂದು ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ಜು.8ರಂದು ಕಾಣೆಯಾಗಿದ್ದ ಬಾಲಕಿಯನ್ನು ಬೆಂಗಳೂರು ಸಂಜಯ ನಗರ ಪೊಲೀಸ್ ಠಾಣೆಯಿಂದ ಕರೆದುಕೊಂಡು ಬಂದು ಮಹಿಳಾ ಠಾಣೆಗೆ ಹಾಜರುಪಡಿಸಿದರು. ಈ ವೇಳೆ ನೊಂದ ಬಾಲಕಿ ನೀಡಿದ ಹೇಳಿಕೆ ಪ್ರಕಾರ, ಆಕೆ ಜು.5ರಂದು ತನ್ನ ಪ್ರಿಯಕರ ಹಾವೇರಿ ಜಿಲ್ಲೆಯ ಹೀರೆಕೆರೆಯೂರಿನ ರಾಜು ಇಳಿಗಾರ್ ಎಂಬಾತನನ್ನು ನೋಡಲು ಆತನ ಮನೆಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಹೊರಟಿದ್ದಳು.
ಈ ಮಧ್ಯೆ ಆಕೆ ರಾಜುಗೆ ಫೋನ್ ಮಾಡಿ ತಾನು ಬರುವ ವಿಷಯ ತಿಳಿಸಿದ್ದಳು. ಆದರೆ ಆತ ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದನು. ಆದರೂ ಮನೆಯತ್ತ ಬರುತ್ತಿದ್ದ ಬಾಲಕಿಯನ್ನು ಪ್ರಿಯಕರ ರಾಜು ಹಾಗೂ ಅವರ ಮನೆಯವರು ಹಾವೇರಿಯ ಹಲಗೇರಿ ಬಸ್‌ನಿಲ್ಧಾಣದಿಂದ ಊರಿಗೆ ಹೋಗಲು ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಬಿಟ್ಟು ಬಂದರು.
ಬಸ್ಸಿನಲ್ಲಿಯೇ ಅತ್ಯಾಚಾರ: ರಾಣೆಬೆನ್ನೂರು ಬಸ್ ನಿಲ್ದಾಣದಲ್ಲಿ ಆಕೆಗೆ ಈ ಮೊದಲು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪರಿಚಯವಾದ ನಿರ್ವಾಹಕ ರಾಘ ವೇಂದ್ರ ಸಿಕ್ಕಿದ್ದು, ಆತನಲ್ಲಿ ಸಹಾಯ ಮಾಡುವಂತೆ ಕೇಳಿದ್ದಳು. ಆದರೆ ಆತ ಆಕೆಯನ್ನು ಪುಸಲಾಯಿಸಿ ರಾತ್ರಿ 12ಗಂಟೆ ಸುಮಾರಿಗೆ ಅಲ್ಲೆ ನಿಂತಿದ್ದ ಕೆಎಸ್ ಆರ್‌ಟಿಸಿ ಬಸ್ಸಿನಲ್ಲಿ ಅತ್ಯಾಚಾರ ನಡೆಸಿದನು. ಅವನ ನಂತರ ಯುವರಾಜ್ ಮತ್ತು ವೀರಯ್ಯ ಬಂದು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಾಲಕಿಯ ಹೇಳಿಕೆಯಂತೆ ಪೊಲೀಸರು ನಾಪತ್ತೆ ಪ್ರಕರಣವನ್ನು ಪೊಕ್ಸೋ ಕಾಯ್ದೆಯಂತೆ ಪರಿವರ್ತಿಸಿಕೊಳ್ಳಲು ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ನಿವೇದಿಸಿಕೊಂಡರು. ಈ ಹಿನ್ನೆಲೆಯಲ್ಲಿ ವಿಶೇಷ ಪೊಲೀಸ್ ತಂಡವನ್ನು ರಚಿಸಿ ತನಿಖೆಯನ್ನು ತೀವ್ರಗೊಳಿಸಲಾಯಿತು. ಅದರಂತೆ ಪೊಲೀಸರು ಆರೋಪಿ ಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ಮತ್ತು ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ ಮಾರ್ಗದರ್ಶನದಲ್ಲಿ ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ, ಉಡುಪಿ ಮಹಿಳಾ ಠಾಣಾ ಪ್ರಭಾರ ಉಪನಿರೀಕ್ಷಕಿ ಕಲ್ಪನಾ ಬಿ., ಎಎಸ್ಸೈ ವಿಜಯ, ಸಿಬ್ಬಂದಿಗಳಾದ ಉಮೇಶ್, ಜೀವನ್, ಅರುಣ್, ಬಾಲಕೃಷ್ಣ , ಇಮ್ರಾನ್, ಪ್ರಸನ್ನ, ಜ್ಯೋತಿ ನಾಯಕ್, ಸುಮನಾ, ಮಾಲತಿ, ಶ್ರುತಿ, ಮಹಾಬಲೇಶ್ವರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.