×
Ad

'ಎಲ್ಲಾ ರೈತರಿಗೂ ಸಾಲ ಮನ್ನದ ಸೌಲಭ್ಯ ಸಿಗಬೇಕು'

Update: 2017-07-11 21:02 IST

ಬೆಳ್ತಂಗಡಿ, ಜು.11: ರೈತರ ಅಲ್ಪಾವಧಿ ಸಾಲಗಳ 50 ಸಾವಿರ ರೂ. ತನಕ ಮನ್ನಾ ಮಾಡಿರುವುದನ್ನು ಅಭಿನಂದಿಸುತ್ತೇವೆ. ಆದರೆ ಕೆಲವೊಂದು ರೈತರು ಸಾಲ ಮರುಪಾವತಿಸಿ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಿದ್ದು ಘೋಷಣೆಯಾದ ದಿನಾಂಕದಂದು ಹೊರ ಸಾಲ ಇಲ್ಲದೆ ಇದ್ದು ಅವರು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗುತ್ತಿದ್ದಾರೆ. ಸಾಲ ಮರು ಪಾವತಿ ಮಾಡಿದ ಎಲ್ಲಾ ರೈತರಿಗೆ ಸಾಲ ಮನ್ನಾದ ಸೌಲಭ್ಯ ಸಿಗಬೇಕು ಎಂದು ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್ ಎಸ್ ಗೋಖಲೆ ಹೇಳಿದ್ದಾರೆ. 

ಅವರು ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಸರಕಾರದ ನಿಯಮದಂತೆ ವಾಯಿದೆಯೊಳಗೆ ಸಾಲ ಮರುಪಾವತಿ ಮಾಡಿದರೆ 0% ಬಡ್ಡಿ ಸೌಲಭ್ಯವಿರುವುದರಿಂದ 100% ಮರುಪಾವತಿಯಾಗುತ್ತಿದ್ದು ಮತ್ತೆ ಹೊಸ ಸಾಲ ಪಡೆಯಬೇಕಾದರೆ 2 ಕಾರಣಗಳಿಂದ ವಿಳಂಬವಾಗುತ್ತಿದ್ದು ಒಂದು 3 ವರ್ಷಕ್ಕೊಮ್ಮೆ ಕೃಷಿ ಕ್ಷೇತ್ರದ ಪಹಣಿ ಪತ್ರ ನೀಡಿ ಸಾಲದ ಮಿತಿ ನಿರ್ಧರಿಸಿ ಮಂಜೂರಾತಿ ಬೇಕಾಗಿದ್ದು ಈ ಪ್ರಕ್ರಿಯೆ ಈ ಸಾಲಿನಲ್ಲಿ ಆದ್ದರಿಂದ ತಾಂತ್ರಿಕ ಕಾರಣದಿಂದ ಪಹಣಿ ಪತ್ರ ಹಾಗೂ ಸಾಲದ ಮಿತಿ ಪತ್ರಗಳು ವಿಳಂಭವಾಗಿವೆ.

ಇನ್ನೊಂದು ಈ ಪ್ರದೇಶದಲ್ಲಿ ಉತ್ತಮ ಮಳೆಯಾದ್ದರಿಂದ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದು ಇದರಿಂದಲೂ ಹೊಸ ಸಾಲಕ್ಕೆ ಅರ್ಜಿ ಸಲ್ಲಿಸಲು ವಿಳಂಬವಾಗುತ್ತಿದೆ. ಇದರಿಂದ ಈ ರೀತಿ ವಂಚನೆಗೊಳಗಾದ ಸುಮಾರು 4 ಸಾವಿರ ಕೃಷಿಕರ ಸಂಖ್ಯೆಯಿದ್ದು ಇವರಿಗೂ ಸಾಲ ಮನ್ನಾ ಪ್ರಯೋಜನ ಸಿಗಬೇಕು ಎಂದು ಬೆಳ್ತಂಗಡಿ ಶಾಸಕ ಕೆ. ವಸಂತ ಬಂಗೇರ ಮೂಲಕ ಮುಖ್ಯಮಂತ್ರಿಗಳನ್ನು ಒತ್ತಾಯಿಸಲಾಗಿದೆ.

ಮುಖ್ಯ ಮಂತ್ರಿ ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.  ಸಹಕಾರಿ ಕ್ಷೇತ್ರಗಳಲ್ಲಿ ಪಡಿತರ ವಿತರಣೆ ಮಾಡುತ್ತಿರುವುದರಿಂದ ಅಕ್ಕಿ ಸೀಮೆಎಣ್ಣೆಗಳಲ್ಲಿ ಸ್ವಾಭಾವಿಕ ತೇಮಾನುಗಳು ಕೂಡಾ ಸಮಸ್ಯೆಯಾಗಿದ್ದು ಇದರಿಂದ ಸಾಕಷ್ಟು ಕಷ್ಟ ನಷ್ಟಗಳಾಗುತ್ತಿದೆ. ಆಹಾರ ಇಲಾಖೆಯ ಅಧಿಕಾರಿಗಳು ಇದಕ್ಕೆ ಸಂಬಂಧಿಸಿದ ಸಭೆಗಳಲ್ಲಿ ಸಹಕಾರಿ ಸಂಸ್ಥೆಗಳ ಬಗ್ಗೆ ಕೀಳಾಗಿ ಮಾತನಾಡುವುದು ಇದನ್ನೆಲ್ಲಾ ಖಂಡಿಸಲಾಗುವುದು. ಪಡಿತರ ವಿತರಣೆಗೆ ಪಿಒಎಸ್ ಅಳವಡಿಸಿಕೊಳ್ಳುವ ವಿಚಾರದಲ್ಲಿ ಸದ್ರಿ ಯಂತ್ರಗಳನ್ನು ಸರಕಾರವೇ ಒದಗಿಸಿಕೊಡಬೇಕು ಮತ್ತು ಮೂಲ ಸೌಕರ್ಯಗಳು ಇರುವ ಬಗ್ಗೆ ಸರಕಾರ ಖಚಿತ ಪಡಿಸಿಕೊಳ್ಳಬೇಕು ಎಂದರು. 

ಗೋಷ್ಠಿಯಲ್ಲಿ ತಾಲೂಕಿನ ಸಹಕಾರಿ ಸಂಸ್ಥೆಗಳ ಮುಖ್ಯಸ್ಥರುಗಳಾದ ಜಗನ್ನಾಥ ಗೌಡ ಅಡ್ಕಾಡಿ, ವಸಂತ ಮಜಲು, ಮುನಿರಾಜ ಅಜ್ರಿ, ಸುಂದರ ಹೆಗ್ಡೆ, ನಾರಾಯಣ ಗೌಡ, ಮಹಾವೀರ ಬಳ್ಳಾಲ್, ವಿ. ಟಿ. ಸೆಬಾಸ್ಟಿಯನ್, ಗೋವಿಂದ ಚಿಪ್ಳೂನ್ಕರ್, ಹರಿಪ್ರಸಾದ್, ನಾರಾಯಣ ಫಡ್ಕೆ, ತ್ಯಾಂಪಣ್ಣ, ಪದ್ಮನಾಭ, ಸುಬ್ರಹ್ಮಣ್ಯ ರಾವ್, ಉಮೇಶ್, ಜಯಂತ್ ಪೂಜಾರಿ, ಜಾಕೋಬ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News