ಧರ್ಮಸ್ಥಳದ ಹೆಸರಿನಲ್ಲಿ ಕಾಂಗ್ರೆಸ್ ಆಣೆ ಪ್ರಮಾಣದ ರಾಜಕೀಯ ನಡೆಸಿಲ್ಲ: ಹರಿಶ್ ಕುಮಾರ್
ಮಂಗಳೂರು.ಜು.11: ಧರ್ಮಸ್ಥಳದ ಹೆಸರಿನಲ್ಲಿ ಆಣೆ ಪ್ರಮಾಣದ ರಾಜಕೀಯ ಮಾಡಲು ಕೆಲವರು ಹೊರಟಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ಮುಖಂಡರನ್ನು ಎಳೆದು ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ರೀತಿಯ ಆಣೆ-ಪ್ರಮಾಣದ ರಾಜಕೀಯದಲ್ಲಿ ಕಾಂಗ್ರೆಸ್ ತೊಡಗಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ವಾರ್ತಾಭಾರತಿಗೆ ತಿಳಿಸಿದ್ದಾರೆ.
ಧರ್ಮಸ್ಥಳದ ಹೆಸರಿನಲ್ಲಿ ಈ ಹಿಂದೆಯೂ ಇಬ್ಬರು ಮುಖ್ಯಮಂತ್ರಿಗಳು ಪರಸ್ಪರ ಆಣೆ-ಪ್ರಮಾಣ ಮಾಡಿದ್ದಾರೆ. ಧರ್ಮ ಜನರ ನಂಬಿಕೆಯ ಹೆಸರಿನಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ರಾಜಕೀಯ ಮಾಡಲು ಹೊರಟಿಲ್ಲ. ಕಾಂಗ್ರೆಸ್ ಪ್ರಜಾಪ್ರಭುತ್ವದ ಜಾತ್ಯತೀತ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಾ ಬಂದ ಪಕ್ಷ. ಅದೇ ರೀತಿ ಜನರ ಧಾರ್ಮಿಕ ನಂಬಿಕೆಗಳಿಗೂ ಗೌರವ ನೀಡುತ್ತಾ ಬಂದ ಪಕ್ಷ. ಅದನ್ನು ರಾಜಕೀಯಕ್ಕೆ ಬಲಸಿಕೊಂಡಿಲ್ಲ ಎನ್ನುವುದನ್ನು ಜಿಲ್ಲೆಯ ಜನತೆಗೆ ಸ್ಪಷ್ಟಪಡಿಸಲು ಇಚ್ಚಿಸುವುದಾಗಿ ಹರಿಶ್ ಕುಮಾರ್ ತಿಳಿಸಿದ್ದಾರೆ.
ರಮಾನಾಥ ರೈ ಧರ್ಮಸ್ಥಳದ ಹೆಸರಿನಲ್ಲಿ ಆಣೆ ಮಾಡಲು ಯಾರನ್ನೂ ಆಹ್ವಾನಿಸಿಲ್ಲ:- ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕಾಂಗ್ರೆಸ್‌ನ ಹಿರಿಯ ಮುಖಂಡರಾದ ರಮಾನಾಥ ರೈ ಯವರು ಯಾರನ್ನೂ ಧರ್ಮಸ್ಥಳದಲ್ಲಿ ಆಣೆ ಮಾಡಲು ಆಹ್ವಾನಿಸಿಲ್ಲ. ಈ ಬಗ್ಗೆ ಅಪಪ್ರಚಾರ ಮಾಡಲಾಗಿದೆ. ಅವರನ್ನು ಆಣೆ ಪ್ರಮಾಣಕ್ಕೆ ಆಹ್ವಾನಿಸುತ್ತಿರುವವರು ಈಗ ಸಂಘ ಪರಿವಾರದೊಂದಿಗೆ ಸದಾವತ್ಸಲೇ...ಎನ್ನುತ್ತಿದ್ದವರು. ಅವರ ಮಾತಿಗೆ ನಮ್ಮ ಮುಖಂಡರು ಉತ್ತರ ಕೊಡಲು ಹೋಗಿಲ್ಲ. ಪಕ್ಷದ ಮುಖಂಡರಾದ ರಮಾನಾಥ ರೈ ಮತ್ತು ಜನಾರ್ದನ ಪುಜಾರಿಯವರ ನಡುವೆ ವೈಮನಸ್ಸು ಉಂಟು ಮಾಡಲು ಈ ರೀತಿಯ ತಂತ್ರ, ರಾಜಕೀಯ ನಡೆಯುತ್ತಿದೆ. ಜನಾರ್ದನ ಪೂಜಾರಿಯವರು ನಮ್ಮ ಪಕ್ಷದ ಹಿರಿಯ ನಾಯಕರು ಅವರ ಬಗ್ಗೆ ನಮಗೆ ಗೌರವವಿದೆ. ಸಂಘ ಪರಿವಾರದೊಂದಿಗೆ ಗುರುತಿಸಿಕೊಂಡವರು ನಮ್ಮ ಪಕ್ಷದ ನಾಯಕರ ಬಗ್ಗೆ ಅಪನಂಬಿಕೆಗೆ ಮಾತುಗಳನ್ನು ಆಡುತ್ತಿದ್ದಾರೆ. ಆಣೆ ಪ್ರಮಾಣದ ರಾಜಕೀಯದಲ್ಲಿ ತೊಡಗಿದ್ದಾರೆ ಎಂದು ಹರೀಶ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.