ಶೀಘ್ರವೇ ಬರಲಿದೆ ರಾಮದೇವ್ ಸೆಕ್ಯೂರಿಟಿ ಏಜೆನ್ಸಿ
ಡೆಹ್ರಾಡೂನ್,ಜು.11: ತ್ವರಿತವಾಗಿ ಮಾರಾಟವಾಗುವ ಬಳಕೆದಾರ ವಸ್ತುಗಳು (ಎಫ್‌ಎಂಸಿಜಿ) ಮತ್ತು ಆಯುರ್ವೇದ ಕ್ಷೇತ್ರಗಳಲ್ಲಿ ಯಶಸ್ಸಿನ ಬಳಿಕ ತನ್ನ ಉದ್ಯಮ ಸಾಮ್ರಾಜ್ಯವನ್ನು ವಿಸ್ತರಿಸಲು ಹವಣಿಸುತ್ತಿರುವ ಯೋಗಗುರು ಬಾಬಾ ರಾಮದೇವ್ ಅವರು ಈಗ ಲಾಭದಾಯಕ ಖಾಸಗಿ ಭದ್ರತಾ ಕ್ಷೇತ್ರದ ಮೇಲೆ ಕಣ್ಣು ಹಾಕಿದ್ದಾರೆ. ಪರಾಕ್ರಮ ಸುರಕ್ಷಾ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಭದ್ರತಾ ಸಂಸ್ಥೆಯನ್ನು ಹುಟ್ಟು ಹಾಕಿರುವ ಅವರು ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕರ್ತವ್ಯ ನಿರ್ವಹಿಸಲು ಯುವಜನರಿಗೆ ತರಬೇತಿ ನೀಡಲು ನಿವೃತ್ತ ಸೇನಾ ಮತ್ತು ಪೊಲೀಸ್ ಅಧಿಕಾರಿಗಳನ್ನು ನೇಮಿಸಿಕೊಂಡಿದ್ದಾರೆ. ಹೀಗಾಗಿ ಹರಿದ್ವಾರದಲ್ಲಿರುವ ರಾಮದೇವರ ಪತಂಜಲಿ ಸಂಕೀರ್ಣದೊಳಗೆ ದೃಢಕಾಯದ ಯುವಕರು ಮತ್ತು ಯುವತಿಯರು ವಿವಿಧ ಕಸರತ್ತುಗಳನ್ನು ಮಾಡುತ್ತಿರುವ ದೃಶ್ಯಗಳು ಯಥೇಚ್ಛವಾಗಿ ಕಾಣಸಿಗುತ್ತಿವೆ.
‘‘ಪತಂಜಲಿಯು ಆಯುರ್ವೇದ, ಯೋಗ ಮತ್ತು ಸ್ವದೇಶಿ ಉತ್ಪನ್ನಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದೆ. ಈಗ ಜನರನ್ನು ಸ್ವಯಂ ರಕ್ಷಣೆ ಮತ್ತು ರಾಷ್ಟ್ರದ ಭದ್ರತೆಗಾಗಿ ಸಿದ್ಧಗೊಳಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ನಾವು ಪರಾಕ್ರಮ ಸೆಕ್ಯೂರಿಟಿ ಏಜೆನ್ಸಿಯನ್ನು ಸ್ಥಾಪಿಸಿದ್ದೇವೆ ’’ ಎಂದು ರಾಮದೇವ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ವರ್ಷದ ಅಂತ್ಯದೊಳಗೆ ಕೆಲವು ರಾಜ್ಯಗಳಲ್ಲಿ ಏಜೆನ್ಸಿಯ ಕಾರ್ಯಾಚರಣೆಯನ್ನು ಆರಂಭಿಸಲು ಪತಂಜಲಿ ಉದ್ದೇಶಿಸಿದೆ ಎಂದು ಮೂಲಗಳು ತಿಳಿಸಿವೆ.