ದ.ಕ. ಜಿಲ್ಲೆಯಲ್ಲಿ ಜು.21ರವರೆಗೆ ನಿಷೇಧಾಜ್ಞೆ ವಿಸ್ತರಣೆ
ಬಂಟ್ವಾಳ, ಜು. 11: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈಗಾಗಲೇ ಸೆಕ್ಷನ್ 144 ಅಡಿಯಲ್ಲಿ ಜಾರಿಯಲ್ಲಿರುವ ನಿಷೇಧಾಜ್ಞೆಯನ್ನು ಜುಲೈ 21ರ ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಿ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಸೋಮವಾರ ಸಂಜೆ ಹೊರಡಿಸಿದ್ದಾರೆ. ಬಂಟ್ವಾಳ, ಸುಳ್ಯ, ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕುಗಳು ನಿಷೇಧಾಜ್ಞೆ ವ್ಯಾಪ್ತಿಗೆ ಒಳಪಡುತ್ತದೆ.
ಈ ಅವಧಿಯಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕ ರಸ್ತೆ, ಬೀದಿ, ಓಣಿ, ಕೇರಿಗಳಲ್ಲಿ ಸಾರ್ವಜನಿಕ ಸ್ಥಳ, ಸಾರ್ವಜನಿಕ ಕಟ್ಟಡ ಮತ್ತು ಸರಕಾರಿ ಕಚೇರಿ ಸುತ್ತಮುತ್ತ ಗುಂಪು ಸೇರುವುದು ಅಥವಾ ಗುಂಪು ಕೂಡುವುದನ್ನು ನಿಷೇಧಿಸಿದೆ.
ಯಾವುದೇ ಆಯುಧ, ಕುಡುಗೋಲು, ಖಡ್ಗ, ಭರ್ಚಿ, ಗದೆ, ಕೋಲು, ಚೂರಿ, ದೊಣ್ಣೆ, ಲಾಠಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ. ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು. ಯಾವುದೇ ಕ್ಷಾರಕ ಅಥವಾ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ನಿಷೇಧಿಸಿದೆ. ಕಲ್ಲುಗಳನ್ನು ಒಟ್ಟುಗೂಡಿಸುವುದು, ಆಯುಧಗಳನ್ನು ಉಪಯೋಗಿಸುವುದನ್ನು ನಿಷೇಧಿಸಿದೆ.
ಸಾರ್ವಜನಿಕವಾಗಿ ಕೋಮು ಸೌಹಾರ್ದಕ್ಕೆ ದಕ್ಕೆ ಬರುವಂತಹ ಯಾವುದೇ ಕೂಗನ್ನು ಉಚ್ಛರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಮಾಡುವುದು, ಪತ್ರಿಕೆಗಳ ಪ್ರಕಟಣೆ ಮಾಡುವುದು ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವ ಮತ್ತು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಲಾಗಿದೆ ಎಂದು ಈ ಸೂಚನೆಯಲ್ಲಿದೆ.
ಸರ್ಕಲ್ ಇನ್ಸ್‌ಪೆಕ್ಟರ್ ನೇಮಕ:
ಬಂಟ್ವಾಳ ನೂತನ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬ್ರಿಜೇಶ್ ಮ್ಯಾಥ್ಯೂರವರನ್ನು ನೇಮಕ ಮಾಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಚಿಕ್ಕಮಗಳೂರು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಎಸ್ಸೈ ಆಗಿದ್ದ ಬ್ರಿಜೇಶ್ ಮ್ಯಾಥ್ಯೂರವರನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಾಗೂ ಆಡಳಿತಾತ್ಮಕ ಕಾರಣಗಳಿಂದ ಖಾಲಿ ಇರುವ ಬಂಟ್ವಾಳ ವೃತ್ತ ನಿರೀಕ್ಷಕ ಹುದ್ದೆಗೆ ವರ್ಗಾಹಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಈ ಆದೇಶ ಹೊರಡಿಸಲಾಗಿದೆ. ಜುಲೈ 12ರಂದು ಮಧ್ಯಾಹ್ನದಿಂದ ಅವರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ.
ಬಂಟ್ವಾಳ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಬಿ.ಕೆ.ಮಂಜಯ್ಯರವರನ್ನು ವರ್ಗಾಯಿಸಿ ಆದೇಶ ಹೊರಡಿಸಲಾಗಿತ್ತು. ಅವರ ಬದಲಿಗೆ ಸಂದೇಶ್ ಎಂಬವರನ್ನು ನಿಯುಕ್ತಿಗೊಳಿಸಿರುವ ಕುರಿತು ಮಾಹಿತಿ ನೀಡಲಾಗಿತ್ತು. ಆದರೆ ಸಂದೇಶ್‌ರವರು ಇನ್ನೂ ಅಧಿಕಾರ ಸ್ವೀಕರಿಸುವ ಪ್ರಕ್ರಿಯೆ ನಡೆದಿಲ್ಲ. ಈ ನಡುವೆ ದಿಢೀರನೆ ಸಂದೇಶ್ ಬದಲಿಗೆ ಮತ್ತೊಬ್ಬರನ್ನು ಸರ್ಕಲ್ ಇನ್ಸ್ಪೆಕ್ಟರ್ ಆಗಿ ಬ್ರಿಜೇಶ್ ಮ್ಯಾಥ್ಯೂರವರನ್ನು ನಿಯುಕ್ತಿಗೊಳಿಸಿ ಸರಕಾರ ಸೂಚನೆ ಹೊರಡಿಸಿದೆ.
ಇದೇ ವೇಳೆ ಹೊಳೆನರಸೀಪುರ ಉಪವಿಭಾಗದ ಎಎಸ್ಪಿ ಡಾ. ಅರುಣ್ ಕೆ.ರವರನ್ನು ಬಂಟ್ವಾಳ ಉಪ ವಿಭಾಗಕ್ಕೆ ಎಎಸ್ಪಿಯಾಗಿ ನೇಮಿಸಿ ಆದೇಶ ಹೊರಡಿಸಲಾಗಿದೆ ಎಂಬ ಮಾಹಿತಿ ಇದೆ.
ಆರೋಪಿಗಳು ಪೊಲೀಸ್ ವಶ:
ಶರತ್ ಮೃತದೇಹದ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟ, ಧಾಂದಲೆ ಘಟನೆಗೆ ಸಂಬಂಧಿಸಿ ಸೋಮವಾರ ರಾತ್ರಿಯಿಂದ ಪೊಲೀಸರು ಹಲವರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಯಾರನ್ನು, ಎಷ್ಟು ಮಂದಿಯನ್ನು ಬಂಧಿಸಲಾಗಿದೆ ಎಂಬ ಮಾಹಿತಿ ಪೊಲೀಸರು ನೀಡಲು ನಿರಾಕರಿಸಿದ್ದಾರೆ. ಪೊಲೀಸರ ಬಂಧನದ ಪಟ್ಟಿಯಲ್ಲಿ ಇನ್ನೂ ಹಲವರ ಹೆಸರು ಇದೆ ಎನ್ನಲಾಗಿದೆ.
ಸಹಜ ಸ್ಥಿತಿ:
ಗಲಬೆ ಪೀಡಿತ ಬಂಟ್ವಾಳ ಮಂಗಳವಾರ ಸಂಪೂರ್ಣ ಸಹಜ ಸ್ಥಿತಿಗೆ ಮರಳಿದೆ. ಪೊಲೀಸ್ ಬಂದೋಬಸ್ತ್, ವಾಹನಗಳ ತಪಾಸಣಾ ಕಾರ್ಯ ಮುಂದುವರಿದಿದೆ.
ಬಂಟ್ವಾಳಕ್ಕೆ ಆರ್.ಕೆ.ದತ್ತ, ಕೆಂಪಯ್ಯ:
ಗಲಭೆ ಪೀಡಿತ ಬಂಟ್ವಾಳಕ್ಕೆ ಜುಲೈ 12ರಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್.ಕೆ. ದತ್ತಾ ಹಾಗೂ ಗೃಹ ಸಚಿವರ ಸಲಹೆಗಾರ ಕೆಂಪಯ್ಯ ಆಗಮಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಬೆಳಗ್ಗೆ ಮಂಗಳೂರಿಗೆ ಆಗಮಿಸುವ ಅವರು ಬಳಿಕ ಬಂಟ್ವಾಳ ನಗರ ಠಾಣೆಗೆ ಆಗಮಿಸಿ ಬಂಟ್ವಾಳ ತಾಲೂಕಿನ ಪ್ರಸ್ತುತ ಕಾನೂನು ಸುವ್ಯವಸ್ಥೆ ಹಾಗೂ ಪರಿಸ್ಥಿತಿ ಬಗ್ಗೆ ಇಲ್ಲಿನ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ ಅವಲೋಕ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.