ಸಂಘಪರಿವಾರದ ನಾಯಕರ ಮೇಲಿನ ಕೇಸು ಹಿಂತೆಗೆದರೆ ಹೋರಾಟ: ಎಸ್.ಡಿ.ಪಿ.ಐ.

Update: 2017-07-12 12:38 GMT

ಮಂಗಳೂರು, ಜು. 12: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆಗೆ ಸಂಬಂಧಿಸಿ ಮತ್ತು ಶರತ್ ಶವ ಯಾತ್ರೆ  ಕೈಕಂಬ, ಬಿ.ಸಿ.ರೋಡ್ ತಲುಪುತ್ತಿದ್ದಂತೆ ಮುಸಲ್ಮಾನರ ಅಂಗಡಿ ಮುಗಟ್ಟುಗಳಿಗೆ, ವಾಹನಗಳಿಗೆ ಕಲ್ಲೆಸೆತ ಮತ್ತು ಅಮಾಯಕ ಯುವಕನಿಗೆ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆಯ ನೇತೃತ್ವ ವಹಿಸಿ, ಪ್ರೇರೇಪಿಸಿದ ಸಂಘಪರಿವಾರದ ನಾಯಕರ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರ ಕಾರ್ಯ ಶ್ಲಾಘನೀಯ.

ಅದೇ ರೀತಿ ಕೇವಲ ಈ ವಿಚಾರದಲ್ಲಿ ಮಾತ್ರ ಪ್ರಕರಣ ದಾಖಲಿಸದೆ ಆಶ್ರಫ್ ಕಲಾಯಿ ಹತ್ಯೆಗೆ ಸಂಬಂಧಿಸಿಯೂ ಕೃತ್ಯಕ್ಕೆ ಸಂಬಂಧಿಸಿದ ದುಷ್ಕರ್ಮಿಗಳ ವಿರುದ್ಧ ಹಾಗೂ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕೆಂದು ಎಸ್.ಡಿ.ಪಿಐ. ಒತ್ತಾಯಿಸಿದೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲಾ ಅಹಿತಕರ ಘಟನೆಯ ಹಿಂದೆ ಇವರ ಕೈವಾಡ ನಿಸ್ಸಂಶಯ. 144 ಸೆಕ್ಷನ್ ಜಾರಿಯಲ್ಲಿರುವಾಗ ಕಾನೂನನ್ನು ಉಲ್ಲಂಘಿಸಿ ಪ್ರತಿಭಟನೆಗೈದು ವಿಜೃಂಭಿಸಿದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಯಾಕೆ ಪೊಲೀಸರು ಪ್ರಕರಣ ದಾಖಲಿಸಲಿಲ್ಲ ಎಂಬುದು ಸಾರ್ವಜನಿಕವಾಗಿ ಚರ್ಚೆಯಲ್ಲಿರುವ ಪ್ರಶ್ನೆಯಾಗಿದೆ. ಕೇವಲ ಇಬ್ಬರು ಸಂಸದರ ಮೇಲೆ ಕೇಸು ದಾಖಲಿಸಿ ಇನ್ನಿತರ ಬಿಜೆಪಿ ಮತ್ತು ಸಂಘಪರಿವಾರದ ನಾಯಕರನ್ನು ರಕ್ಷಿಸುವಂತಹ ಕೆಲಸವು ನಡೆದಿದೆ.ಇದರಿಂದ ಜಿಲ್ಲೆಯಲ್ಲಿ ಶಾಂತಿ ನೆಲೆಸಲು ಹೇಗೆ ಸಾಧ್ಯ ಎಂಬುದು ಜಿಲ್ಲಾಡಳಿತ ಜನತೆಗೆ ತಿಳಿಯಪಡಿಸಬೇಕಾಗಿದೆ.

ಆದುದರಿಂದ ನಿಷೇಧಾಜ್ಞೆ ಉಲ್ಲಂಘಿಸುವ ಮೂಲಕ ಅಶಾಂತಿಯನ್ನು ಸೃಷ್ಟಿಸಿದ ಬಿಜೆಪಿ ಮತ್ತು ಸಂಘಪರಿವಾರದ ನಾಯಕರ ಮೇಲೆ ಗಂಭೀರ ಪ್ರಕರಣ ದಾಖಲಿಸಬೇಕೆಂದು ಎಸ್ ಡಿ ಪಿ ಐ ಒತ್ತಾಯಿಸಿದೆ.

ಬಿಜೆಪಿ ಮತ್ತು ಸಂಘಪರಿವಾರದ ಸಂಘಟನೆಗಳು ತಮ್ಮ ನಾಯಕರ ಮೇಲಿನ ಕೇಸುಗಳನ್ನು ಹಿಂತೆಗೆಯದಿದ್ದಲ್ಲಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಸಿ, ಪೊಲೀಸರ ಮೇಲೆ ಒತ್ತಡ ತಂದು ಪ್ರಕರಣವನ್ನು ದಾರಿ ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸರಕಾರ, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಇವರ ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲೆಯಲ್ಲಿ ನಡೆದ ಎಲ್ಲಾ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕಲ್ಲಡ್ಕ ಪ್ರಭಾಕರ ಭಟ್ ನನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು. ಸಂಘಪರಿವಾರದ ನಾಯಕರ ಮೇಲಿನ ಕೇಸುಗಳನ್ನು ಹಿಂತೆಗೆದರೆ ಎಸ್ಡಿಪಿಐ ಜಿಲ್ಲಾದ್ಯಂತ ಹೋರಾಟ ನಡೆಸಲಿದೆ ಎಂದು ಜಿಲ್ಲಾ ಮಾಧ್ಯಮ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ  ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News