×
Ad

ಅ.1ರೊಳಗೆ ಜಿಎಸ್‌ಟಿ ವ್ಯಾಪ್ತಿಗೊಳಪಡಲು ಅವಕಾಶ: ಡಾ.ಸುಬ್ರಹ್ಮಣ್ಯಮ್

Update: 2017-07-12 18:39 IST

ಮಂಗಳೂರು, ಜು.12: ಕೇಂದ್ರ ಸರಕಾರವು ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ಒಳಪಡಲು ಅಕ್ಟೋಬರ್ 1ರವರೆಗೆ ಕಾಲಾವಕಾಶವಿದೆ. ಅಲ್ಲಿಯವರೆಗೆ ಸದ್ಯದ ಪರಿಸ್ಥಿತಿಯಲ್ಲೇ ಮುಂದುವರೆಯಬಹುದು. ಬಳಿಕ ಜಿಎಸ್‌ಟಿ ವ್ಯಾಪ್ತಿಗೆ ಒಳಪಡದವರ ವಿರುದ್ಧ ಕಾನೂನು ಕ್ರಮಕೈಗೊಂಡು ದಂಡ ವಿಧಿಸಲಾಗುವುದು ಎಂದು ಕೇಂದ್ರ ಕಂದಾಯ ಸೇವೆ ವಿಭಾಗ ಮತ್ತು ತೆರಿಗೆ ಇಲಾಖೆಯ ಮಂಗಳೂರು ಆಯುಕ್ತಾಲಯದ ಆಯುಕ್ತ ಡಾ.ಎಂ. ಸುಬ್ರಹ್ಮಣ್ಯಮ್ ತಿಳಿಸಿದ್ದಾರೆ.

ನಗರದ ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ)ಯ ಸಭಾಭವನದಲ್ಲಿ ಬುಧವಾರ ನಡೆದ ‘ಜಿಎಸ್‌ಟಿ ಕುರಿತ ಜಾಗೃತಿ ಕಾರ್ಯಕ್ರಮ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಮೊದಲ ಬಾರಿಗೆ ಮೌಲ್ಯವರ್ಧಿತ ತೆರಿಗೆ (ವ್ಯಾಟ್) ಜಾರಿಗೊಳಿಸಿದಾಗಲೂ ಇದೇ ಸಮಸ್ಯೆ ಜನಸಾಮಾನ್ಯರಿಗೂ ಕಾಡಿತ್ತು. ಕಾಲಕ್ರಮೇಣ ಜನಸಾಮಾನ್ಯರು ಅರ್ಥ ಮಾಡಿಕೊಂಡು ಅದಕ್ಕೆ ಹೊಂದಿಕೊಂಡರು. ಅದರ ಹಾಗೆಯೇ ಜಿಎಸ್‌ಟಿ ಕುರಿತು ಇರುವ ಗೊಂದಲಗಳಿಗೆ ಪರಿಹಾರವನ್ನು ಕಂಡುಕೊಂಡು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಬೇಕು ಎಂದು ಡಾ.ಎಂ. ಸುಬ್ರಹ್ಮಣ್ಯಮ್ ಸಲಹೆ ನೀಡಿದರು.

ಜಿಎಸ್‌ಟಿ ಬಗ್ಗೆ ಎಲ್ಲ ರೀತಿಯಿಂದಲೂ ಚಿಂತನೆ ನಡೆಸಿ ಯಾವುದೇ ಸಮಸ್ಯೆ ಕಂಡುಬಾರದ ಹಾಗೆ ಮಾಹಿತಿ ತಂತ್ರಜ್ಞಾನದ ಮೂಲಕ ಪರಿಹಾರವನ್ನು ಕಂಡುಕೊಳ್ಳಲಾಗಿದೆ. ಜನರು ಜಿಎಸ್‌ಟಿ ಬಗ್ಗೆ ಗೊಂದಲಕ್ಕೊಳಗಾಗಿದ್ದಾರೆ. ಈ ಗೊಂದಲ ನಿವಾರಣೆಯಾದರೆ ಸಮಸ್ಯೆಯೇ ಉದ್ಭವಿಸುವುದಿಲ್ಲ ಎಂದು ಡಾ.ಎಂ. ಸುಬ್ರಹ್ಮಣ್ಯಮ್ ನುಡಿದರು.

2015ರಲ್ಲಿ ಮಲೇಶಿಯಾದಲ್ಲಿ ಜಿಎಸ್‌ಟಿ ಜಾರಿಗೊಳಿಸಲಾಗಿತ್ತು. ಅದಕ್ಕೂ ಮೊದಲು ಸಿಂಗಾಪುರದಲ್ಲೂ ಜಿಎಸ್‌ಟಿಯನ್ನು ಜಾರಿಗೆ ತಂದಿದ್ದರು. ಅಲ್ಲಿನ ಜನಜೀವನದಲ್ಲಿ ಗೊಂದಲ, ಸಮಸ್ಯೆ ಕಂಡು ಬಂದಿದ್ದವು. ಕಾಲಕ್ರಮೇಣ ಜನರು ಹೊಂದಿಕೊಂಡರು ಎಂದರಲ್ಲದೆ, ಭಾರತದಲ್ಲೂ ಅಂತಹ ಸಮಸ್ಯೆ, ಗೊಂದಲ ಏರ್ಪಡಬಾರದೆಂಬ ಸದುದ್ದೇಶದಿಂದ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ತೆರಿಗೆ ನಿಯಮಗಳು ಸರಳವಾಗಿದ್ದು, ಜನಸಾಮಾನ್ಯರು ಕೂಡಲೇ ಅರಿತುಕೊಳ್ಳಬೇಕು. ನಿಗದಿತ ಕಾಲಾವಕಾಶದೊಳಗೆ ಜಿಎಸ್‌ಟಿ ವ್ಯಾಪ್ತಿಗೆ ಒಳಪಡಬೇಕು ಎಂದರು.

ಬೆಂಗಳೂರಿನ ಪ್ರಭಾರ ತೆರಿಗೆ ಸಹಾಯಕ ಆಯುಕ್ತ ಶ್ರೇಯಸ್, ಪುತ್ತೂರಿನ ತೆರಿಗೆ ಪ್ರಧಾನ ಕಚೇರಿಯ ಸಹಾಯಕ ಆಯುಕ್ತ ಪಿ.ಟಿ. ರಾಯ್, ರಾಮಕೃಷ್ಣ ಭಟ್, ನಾಗರಾಜ್ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಕೆ.ಎಸ್. ಸುಲೋಚನಾ, ಕೆಸಿಸಿಐ ಖಜಾಂಚಿ ಗಣೇಶ್ ಭಟ್ ಉಪಸ್ಥಿತರಿದ್ದರು. ಕೆಸಿಸಿಐ ಅಧ್ಯಕ್ಷ ಜೀವನ್ ಸಲ್ದಾನ್ಹಾ ಸ್ವಾಗತಿಸಿದರು. ವಾಟಿಕಾ ಪೈ ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಕಾರ್ಯದರ್ಶಿ ಪಿ.ಬಿ. ಅಬ್ದುಲ್ ಹಮೀದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News