ಲಾಲು ಬಳಗಕ್ಕೆ 72 ಗಂಟೆಗಳ ಗಡುವು ವಿಧಿಸಿದ ನಿತೀಶ್

Update: 2017-07-12 14:21 GMT

ಪಾಟ್ನಾ,ಜು.12: ಬಿಹಾರದಲ್ಲಿಯ ಸಮ್ಮಿಶ್ರ ಸರಕಾರದ ಭವಿಷ್ಯವನ್ನು ನಿರ್ಧರಿಸಲು 72 ಗಂಟೆಗಳ ಗಡುವು ವಿಧಿಸಲಾಗಿದೆ ಎಂದು ವರದಿಯಾಗಿದ್ದು, ಇದರೊಂದಿಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ ನಡುವಿನ ದೋಸ್ತಿ ಕೊನೆಗೊಳ್ಳುವ ಸಂಕೇತಗಳು ಗೋಚರಿಸತೊಡಗಿವೆ.

ಲಾಲು ಪುತ್ರ ತೇಜಸ್ವಿ ಯಾದವ್ ಶನಿವಾರ ಸಂಜೆಯೊಳಗೆ ತನ್ನ ಉಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ನಿತೀಶ್ ಬಯಸಿದ್ದಾರೆ. ಆದರೆ ಇದನ್ನು ಬಹಿರಂಗವಾಗಿ ಹೇಳಲಾಗಿಲ್ಲ. ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗೆ ಯಾದವ ಕುಟುಂಬವು ಜನರಿಗೆ ಉತ್ತರಿಸುವುದು ಈಗಿನ ತುರ್ತು ಅಗತ್ಯವಾಗಿದೆ ಎಂದು ಜೆಡಿಯು ನಾಯಕ ಕೆ.ಇ.ತ್ಯಾಗಿ ಹೇಳಿದ್ದಾರೆ. ಆದರೆ ಇದರ ಒಳಾರ್ಥ ತೇಜಸ್ವಿ ರಾಜೀನಾಮೆ ನೀಡಬೇಕು ಎನ್ನುವುದೇ ಆಗಿದೆ ಎನ್ನುವುದು ರಾಜಕೀಯ ಪಂಡಿತರ ಅಭಿಪ್ರಾಯ.

ಲಾಲು ವಿರುದ್ಧದ ಭ್ರಷ್ಟಾಚರ ಪ್ರಕರಣದಲ್ಲಿ ತೇಜಸ್ವಿ ಯಾದವರನ್ನು ಹೆಸರಿಸಲಾಗಿದ್ದು, ಸಿಬಿಐ ಶುಕ್ರವಾರ ಅವರ ಪಾಟ್ನಾ ನಿವಾಸದ ಮೇಲೆ ದಾಳಿಯನ್ನೂ ನಡೆಸಿದೆ. ಲಾಲು ಅವರು ರೈಲ್ವೆ ಸಚಿವರಾಗಿದ್ದಾಗಿನ ಕಾಲದ ಈ ಪ್ರಕರಣವು ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನಿರಂತರ ಪ್ರಚಾರ ನಡೆಸುತ್ತಿರುವ ಅವರನ್ನು ದಂಡಿಸುವ ಕೇಂದ್ರದ ಕ್ರಮವಾಗಿದೆ ಎಂದು ಯಾದವ ಕಂಪನಿ ಹೇಳಿದೆ.

  ಮಂಗಳವಾರ ಜೆಡಿಯು ಸಭೆಯಲ್ಲಿ ಮಾತನಾಡಿದ ನಿತೀಶ್, ಯಾದವ ಕುಟುಂಬವು ಈವರೆಗೆ ನೀಡಿರುವ ಸಮರ್ಥನೆಯು ಏನೇನೂ ಸಾಲದು. ಭ್ರಷ್ಟಾಚಾರ ಆರೋಪಕ್ಕೆ ಗುರಿಯಾಗಿರುವರು ಅದಕ್ಕೆ ಉತ್ತರಿಸಬೇಕು ಎಂದು ಹೇಳಿದ್ದರು. ಭ್ರಷ್ಟಾಚಾರವನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂಬ ತನ್ನ ನೀತಿಯಿಂದ ತಾನು ದೂರ ಸರಿಯುವುದಿಲ್ಲ ಎಂದು ಅವರು ಒತ್ತಿ ಹೇಳಿದ್ದರು.

ಸಿಬಿಐ ಆರೋಪಗಳಿಗೆ ವಿವರವಾದ ಉತ್ತರವನ್ನು ನೀಡಲು ಹೊರಟರೆ ತೇಜಸ್ವಿಯನ್ನು ‘ಕಾಂಗರೂ ನ್ಯಾಯಾಲಯ’ಕ್ಕೆ ತಳ್ಳಿದಂತಾಗುತ್ತದೆ ಮತ್ತು ಅವರ ವಿರುದ್ಧ ದಾಳಿಗೆ ಪ್ರತಿಪಕ್ಷಗಳು ಮತ್ತು ತನಿಖಾ ಸಂಸ್ಥೆಗೆ ಅವಕಾಶ ನೀಡಿದಂತಾಗುತ್ತದೆ ಎಂದು ಮಂಗಳವಾರ ರಾತ್ರಿ ಇಲ್ಲಿ ನಡೆದ ಆರ್‌ಜೆಡಿ ಸಭೆಯು ಅಭಿಪ್ರಾಯಿಸಿದೆ.

ಜೆಡಿಯು ಜೊತೆಗಿನ ಎರಡು ವರ್ಷಗಳ ಪಾಲುದಾರಿಕೆಗೆ ಅಂತ್ಯ ಹಾಡಲು ಇದು ಸಕಾಲವಾಗಿದೆ ಎಂದು ಸಭೆಯಲಿ ಪಕ್ಷವು ಲಾಲುಗೆ ಸಲಹೆ ನೀಡಿದೆ.

ಸರಕಾರದಿಂದ ಹೊರಹೋಗುವಂತೆ ಔಪಚಾರಿಕ ಸೂಚನೆಯಿಂದ ಉಂಟಾಗಬಹು ದಾದ ಮುಖಭಂಗದಿಂದ ತೇಜಸ್ವಿಯವರನ್ನು ಪಾರು ಮಾಡಲು ಸಂಪುಟದಲ್ಲಿರುವ ತನ್ನ ಪಕ್ಷದ 12 ಸಚಿವರನ್ನು ಲಾಲು ಹಿಂದಕ್ಕೆ ಕರೆಸಿಕೊಳ್ಳಲಿದ್ದಾರೆ, ಅಂದರೆ ಅವರ ಪಕ್ಷ ಸರಕಾರದಿಂದ ಹೊರಬೀಳಲಿದೆ. ಆದರೆ ಸರಕಾರಕ್ಕೆ ಬೇಷರತ್ ಬೆಂಬಲವನ್ನು ಮುಂದುವರಿಸಲಿದ್ದಾರೆ ಎಂದು ಯಾದವ ಪಾಳಯಕ್ಕೆ ನಿಕಟವಾಗಿರುವ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News