ಸಮಗ್ರ ತನಿಖೆಗೆ ಒತ್ತಾಯಿಸಿ ಉಡುಪಿ ಎಸ್ಪಿಗೆ ಮನವಿ
ಉಡುಪಿ, ಜು.12: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೋಳ ಗ್ರಾಮದ ಕೆರೆಕೋಡಿ ಸುರೇಂದ್ರ ಕುಲಾಲ್ ಅನುಮಾನಾಸ್ಪದ ಸಾವಿನ ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಆಗ್ರಹಿಸಿ ಮೃತರ ತಾಯಿ ರತ್ನ ಮೂಲ್ಯ ಹಾಗೂ ಕುಲಾಲ ಸುಧಾರಕ ಸಂಘದ ನಿಯೋಗ ಬುಧವಾರ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಸಲ್ಲಿಸಿತು.
ಜು.2ರಂದು ಬೆಳಗ್ಗೆ ಪಾರ್ಟಿಗೆ ಹೋಗುವುದಾಗಿ ಹೇಳಿ ಹೋದ ಸುರೇಂದ್ರ ಕುಲಾಲ್ ತಡರಾತ್ರಿಯಾದರೂ ಮನೆಗೆ ಬಾರದಿದ್ದಾಗ ಆತನ ಮೊಬೈಲ್‌ಗೆ ಕರೆ ಮಾಡಿದ್ದು, ಆಗ ಜೀತು ಎಂಬಾತ ಕರೆ ಸ್ವೀಕರಿಸಿ ನನ್ನ ಸಾಂಸಾರಿಕ ಜೀವನ ದಲ್ಲಿ ತಲೆ ಹಾಕುತ್ತಿರುವ ಕುಲಾಲ್‌ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದನು. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ ಸುರೇಂದ್ರ ಕುಲಾಲ್ ನಾಪತ್ತೆಯಾಗಿರುವ ಬಗ್ಗೆ ಪ್ರಕರಣ ದಾಖಲಿಸ ಲಾಗಿತ್ತು.
ಆದರೆ ಪೊಲೀಸರು ಎಫ್‌ಐಆರ್‌ನಲ್ಲಿ ಜೀತುವಿನ ಬೆದರಿಕೆಯನ್ನು ಉಲ್ಲೇಖಿಸಲಿಲ್ಲ ಮತ್ತು ಆ ಬಗ್ಗೆ ತನಿಖೆಯೂ ಮಾಡಿಲ್ಲ. ನಂತರ ಜು.7ರಂದು ಅಪ ಹರಣ ಪ್ರಕರಣ ದಾಖಲಿಸಲಾಗಿತ್ತು. ಜು.9ರಂದು ಮನೆ ಸಮೀಪದ ಹಾಡಿ ಯಲ್ಲಿ ಸುರೇಂದ್ರ ಕುಲಾಲ್ ಮೃತದೇಹ ಕೊಳೆತು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಯಿತು. ಮೃತರ ಮೈಯಲ್ಲಿ ಬಟ್ಟೆ ಇರದೆ, ಜೀತು ಎಂಬಾತನ ಜಾಕೆಟ್ ಹೊದಿಸಲಾಗಿತ್ತು. ಹಲ್ಲುಗಳು ಉದುರಿದ್ದವು ಎಂದು ತಾಯಿ ಮನವಿ ಯಲ್ಲಿ ದೂರಿದ್ದಾರೆ.
ಕಾರ್ಕಳ ಗ್ರಾಮಾಂತರ ಠಾಣೆಯ ಪೊಲೀಸರು ನಡೆಸಿದ ಪ್ರಕರಣದ ತನಿಖೆ ಕುರಿತು ಅಸಮಾಧಾನ ಇರುವುದರಿಂದ ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ಸೂಕ್ತ ನ್ಯಾಯ ಒದಗಿಸಿಕೊಡಬೇಕು ಎಂದು ನಿಯೋಗ ಮನವಿಯಲ್ಲಿ ಒತ್ತಾಯಿಸಿದೆ. ಮನವಿ ಸ್ವೀಕರಿಸಿದ ಎಸ್ಪಿ, ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ಈ ಬಗ್ಗೆ ಸರಿಯಾದ ತನಿಖೆ ನಡೆಸಿ ಕ್ರಮ ಜರಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮೃತರ ಸಹೋದರರಾದ ಮೂರ್ತಿ ಕುಲಾಲ್, ಹರೀಶ್ ಚಂದ್ರ ಕುಲಾಲ್, ಸಂಘದ ಅಧ್ಯಕ್ಷ ಭೋಜ ಕುಲಾಲ್, ಯುವ ವೇದಿಕೆಯ ಅಧ್ಯಕ್ಷ ದಿವಾಕರ ಬಂಗೇರ, ಸುರೇಂದ್ರ ಕುಲಾಲ್, ಸಂತೋಷ್ ಮೂಲ್ಯ, ಸುಧೀರ್ ಬಂಗೇರ, ಕುಶಿ ಆರ್.ಮೂಲ್ಯ, ಶಂಕರ್ ಕುಲಾಲ್, ಸತೀಶ್ ಕುಲಾಲ್, ಶಂಕರ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.